ತಿರುವನಂತಪುರ: ದೇಶದ ಮೊದಲ ‘ಡ್ರೋನ್ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರ’ಕ್ಕೆ ಕೇರಳ ಪೊಲೀಸ್ ಇಲಾಖೆ ಶುಕ್ರವಾರ ಚಾಲನೆ ನೀಡಿತು.
ಡ್ರೋನ್‌ಗಳನ್ನು ಬಳಸಿ ನಡೆಸುವ ದಾಳಿಗಳು ದೇಶದಲ್ಲಿ ಭದ್ರತಾ ವ್ಯವಸ್ಥೆಗೆ ಒಡ್ಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಇಲ್ಲಿನ ಎಸ್‌ಎಪಿ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿ, ‘ಗೂಢಚಾರಿಕೆ, ಕಳ್ಳಸಾಗಣೆ ಹಾಗೂ ಭಯೋತ್ಪಾದನೆಯಂತಹ ಕೃತ್ಯಗಳಿಗೆ ದೇಶವಿರೋಧಿ ಶಕ್ತಿಗಳು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ’ ಎಂದ ಅವರು ಇತ್ತೀಚೆಗೆ ಜಮ್ಮುವಿನಲ್ಲಿರುವ ವಾಯುನೆಲೆ ಮೇಲೆ ನಡೆದ ದಾಳಿಯನ್ನು ಉಲ್ಲೇಖಿಸಿದರು.
‘ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಭದ್ರತಾ ಪಡೆಗಳಿಗೆ ಡ್ರೋನ್‌ಗಳ ಬಳಕೆ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ತಂತ್ರಜ್ಞಾನವನ್ನು ಈ ಕೇಂದ್ರ ಅಭಿವೃದ್ಧಿಪಡಿಸುವುದು’ ಎಂದರು.
‘ಡ್ರೋನ್ ನಿರೋಧಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. 5 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಟ ನಡೆಸುವ ಎಲ್ಲ ಬಗೆಯ ಡ್ರೋನ್‌ಗಳನ್ನು ಪತ್ತೆ ಹಚ್ಚಿ, ಅವುಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿರಲಿದೆ’ ಎಂದು ಎಡಿಜಿಪಿ ಮನೋಜ್ ಅಬ್ರಹಾಂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.