ADVERTISEMENT

ಕೇರಳ | ಹಿಂಸಾಚಾರಕ್ಕೆ ಕುಮ್ಮಕ್ಕು: ಕಾಂಗ್ರೆಸ್ ನಾಯಕ ಸತೀಶನ್‌ ವಿರುದ್ಧ ಪ್ರಕರಣ

ಪಿಟಿಐ
Published 21 ಡಿಸೆಂಬರ್ 2023, 2:22 IST
Last Updated 21 ಡಿಸೆಂಬರ್ 2023, 2:22 IST
   

ತಿರುವನಂತಪುರ: ಬುಧವಾರ ರಾಜಧಾನಿ ತಿರುವನಂತಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್‌ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಪೊಲೀಸರ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ ವಿ.ಡಿ ಸತೀಶನ್‌ ವಿರುದ್ಧ ಐಪಿಸಿಯ ಜಾಮೀನು ರಹಿತ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯಲ್ಲಿ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಾಹುಲ್‌ ಮಂಕೂಟ್ಟತ್ತಿಲ್‌, ಶಾಸಕರಾದ ಶಾಫಿ ಪರಂಬಿಲ್, ಎಂ. ವಿನ್ಸೆಂಟ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪೊಲೀಸರ ಕ್ರಮವನ್ನು ಖಂಡಿಸಿರುವ ಸತೀಶನ್‌, ‘ದಯವಿಟ್ಟು.. ನಾನು ಹೆದರಿದ್ದೇನೆ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿ’ ಎಂದು ಕುಹಕವಾಡಿದ್ದಾರೆ.

ಘಟನೆ ಏನು?

ಕಣ್ಣೂರು ಜಿಲ್ಲೆಯ ಕಲ್ಲಿಯಶ್ಶೇರಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಕಪ್ವು ಬಾವುಟ ತೋರಿಸಿದ್ದ ಕಾಂಗ್ರೆಸ್‌ ಹಾಗೂ ವಿದ್ಯಾರ್ಥಿ ಘಟಕ ಕೆಎಸ್‌ಯು ಕಾರ್ಯಕರ್ತರ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ಖಂಡಿಸಿ, ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಾಹುಲ್‌ ಮಂಕೂಟ್ಟತ್ತಿಲ್‌ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ವಿಧಾನಸಭೆ ಬಳಿ ಬುಧವಾರ (ಡಿ.20) ಪ್ರತಿಭಟನೆ ಕೈಗೊಂಡಿದ್ದರು.

ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌, ‘ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಅದಕ್ಕೆ ಪ್ರತಿಯಾಗಿ ಯುವ ಕಾಂಗ್ರೆಸ್‌ ಮತ್ತು ಕೆಎಸ್‌ಯು ಸದಸ್ಯರು ಪ್ರತಿ ದಾಳಿ ನಡೆಸುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದರು.

ಸತೀಶನ್‌ ಅವರ ಮಾತು ಮುಗಿಯುತ್ತಿದ್ದಂತೆಯೇ, ಹಿಂಸಾಚಾರ ಭುಗಿಲೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.