ತಿರುವನಂತಪುರ:ತ್ರಿಶ್ಶೂರ್‌ನ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ಸಲ್ಲಿಸಿದರು.
ಶುಕ್ರವಾರ ರಾತ್ರಿ ಕೊಚ್ಚಿಗೆ ಬಂದಿಳಿದಿದ್ದ ನರೇಂದ್ರ ಮೊದಿ ಅವರು, ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿದರು. ಬಳಿಕ, ತುಲಾಭಾರ ಸೇವೆ ಸಮರ್ಪಿಸಿದರು.
ಮೋದಿ ಅವರ ತುಲಾಭಾರ ಸೇವೆಗಾಗಿ 112 ಕೆ.ಜಿ. ತಾವರೆ ಹೂವುಗಳನ್ನು ತಮಿಳುನಾಡಿನ ನಾಗರಕೊಯಿಲ್‌ನಿಂದ ತರಿಸಲಾಗಿದೆ.
ಗುರುಯೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ.ಬಿ. ಮೋಹನದಾಸ್ ಇದ್ದರು.
ಮೋದಿ ಅವರು 2008ರಲ್ಲೂ ಈ ದೇವಸ್ಥಾನದಲ್ಲಿ ತಾವರೆ ಹೂವುಗಳಲ್ಲಿ ತುಲಾಭಾರ ಸೇವೆ ಮಾಡಿಸಿದ್ದರು.
ತುಲಾಭಾರ ಎಂಬುದು ಒಂದು ಧಾರ್ಮಿಕ ಸೇವೆಯಾಗಿದ್ದು, ವ್ಯಕ್ತಿ ತನ್ನ ತೂಕಕ್ಕೆ ಸಮನಾದ ವಸ್ತುಗಳನ್ನು ಅಂದರೆ ಹೂವು, ಧಾನ್ಯ, ಹಣ್ಣು ಇತರೆ ವಸ್ತುಗಳನ್ನು ದೇಣಿಗೆಯ ರೂಪದಲ್ಲಿ ದೇವರಿಗೆ ಒಪ್ಪಿಸುವುದಾಗಿದೆ.
ತುಲಾಭಾರ ಸೇವೆ ಬಳಿಕ ಆ ಕುರಿತು ಟ್ವೀಟ್ ಮಾಡಿರುವ ಮೋದಿ, ‘ದೇಶದ ಪ್ರಗತಿ ಮತ್ತು ಅಭ್ಯುದಯಕ್ಕಾಗಿ ದೇಶದ ಪ್ರಮುಖ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಗುರುವಾಯೂರು ದೇವಸ್ಥಾನದಲ್ಲಿ ಇದೊಂದು ಆತ್ಮೀಯ ಕ್ಷಣ’ ಎಂದಿದ್ದಾರೆ. ತುಲಾಭಾರ ಕುರಿತ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ದೇವಸ್ಥಾನದ ಮೂಲಗಳ ಪ್ರಕಾರ, ಪ್ರಧಾನಿ ತಾವರೆ ಹೂವುಗಳಲ್ಲದೆ ಬಾಳೆ ಹಣ್ಣು ಮತ್ತು ತುಪ್ಪವನ್ನು ಅರ್ಪಿಸಿದರು. ದೇವಸ್ಥಾನದಲ್ಲಿ ಸುಮಾರು 20 ನಿಮಿಷ ಕಾಲ ಇದ್ದು, ಬಳಿಕ ಸಮೀಪದ ಅತಿಥಿಗೃಹಕ್ಕೆ ನಡೆದುಕೊಂಡು ಹೋದರು.
ಕೇರಳದ ಸಾಂಪ್ರದಾಯಿಕ ಧೋತಿ ಮತ್ತು ಶಾಲು ಧರಿಸಿದ್ದ ಪ್ರಧಾನಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕೇರಳ ರಾಜ್ಯಪಾಲ ಪಿ.ಸದಾಶಿವಂ, ಕೇಂದ್ರ ಸಚಿವರಾದ ವಿ.ಮುರಳೀಧರನ್, ಕೇರಳದ ದೇವಸ್ವಂ ಸಚಿವ ಕಡಕಪಲ್ಲಿ ಸುರೇಂದ್ರನ್ ಅವರು ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.