ಇಡುಕ್ಕಿ/ತಿರುವನಂತಪುರ/ದೆಹಲಿ : ಕೇರಳದ ಹಲವು ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಮಳೆಯ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. ಪ್ರವಾಹದ ಅಬ್ಬರ ಇಳಿಮುಖವಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಸೇನಾ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
ಇಡುಕ್ಕಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ರಾಜ್ಯ ಸರ್ಕಾರ ಇಡುಕ್ಕಿ ಮತ್ತು ವಯನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇದರಿಂದ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಮನೆಗಳಿಗೆ ಮರಳಲು ಹಿಂಜರಿಯುತ್ತಿದ್ದಾರೆ.
‘ಇಡುಕ್ಕಿ ಜಲಾಶಯದಿಂದ ನೀರು ಬಿಡುವ ಮೊದಲು ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮನ್ನು ಬಲವಂತವಾಗಿ ಮನೆ ಖಾಲಿ ಮಾಡಿಸಲಾಯಿತು. ನಾವೆಲ್ಲರೂ ಉಟ್ಟ ಬಟ್ಟೆಯಲ್ಲೇ ನಿರಾಶ್ರಿತರ ಕೇಂದ್ರಕ್ಕೆ ಬಂದಿದ್ದೇವೆ. ಬಹುತೇಕ ಎಲ್ಲರೂ ಈಗ ಮನೆ ಕಳೆದುಕೊಂಡಿದ್ದೇವೆ. ನಿದ್ರೆ ಇಲ್ಲದ ರಾತ್ರಿ ಕಳೆಯುತ್ತಿದ್ದೇವೆ. ಈಗ ನಮ್ಮ ಮನೆಗಳಿಗೆ ವಾಪಸ್ ಹೋಗಲು ಭಯವಾಗುತ್ತಿದೆ’ ಎಂದು ಚೆರುತೋನಿ ಪ್ರದೇಶದ ಕೀರಿತೋಡ್ ಸಮೀಪದ ಗಂಜಿ ಕೇಂದ್ರದಲ್ಲಿರುವ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ದಕ್ಷಿಣ ಏಷ್ಯಾದಲ್ಲೇ ಅತೀ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಇಡುಕ್ಕಿ ಜಲಾಶಯದ ಎಲ್ಲಾ ಐದೂ ಗೇಟ್‌ಗಳನ್ನು ತೆರೆದು ನೀರು ಹೊರ ಬಿಡಲಾಗುತ್ತಿದೆ. 40 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಜಲಾಶಯದ ಐದೂ ಗೇಟ್‌ಗಳನ್ನು ತೆರೆಯಲಾಗಿದೆ. ಇಡುಕ್ಕಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಮಾನಿಕ ಸಮೀಕ್ಷೆ
ಆಗಸ್ಟ್ 12ರವರೆಗೆ ಎಲ್ಲ ಸಾರ್ವಜನಿಕ ಸಭೆ, ಸಮಾರಂಭ ರದ್ದುಪಡಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿಗೆ ಇಳಿದಿದ್ದಾರೆ. ಅವರು ಶನಿವಾರ ಇಡುಕ್ಕಿ, ಅಲಪುಳ, ಎರ್ನಾಕುಲಂ, ವಯನಾಡು, ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರವಾಹದ ಭೀಕರತೆಯ ಸಾಕ್ಷಾತ್ ವರದಿ ಪಡೆದು, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಪ್ರಕಟಿಸಿದರು.
ಸಂತ್ರಸ್ತರ ಪರಿಹಾರಕ್ಕಾಗಿ ವೈಯಕ್ತಿಕವಾಗಿ ₹1 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ಅವರು, ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಕೆಲಸ ಕೈಗೆತ್ತಿಕೊಳ್ಳಲು ಮತ್ತು ರಾಜ್ಯವನ್ನು ನೆರೆ ಬಿಕ್ಕಟ್ಟಿನಿಂದ ಪಾರು ಮಾಡಲು ಉದಾರ ಕೊಡುಗೆ ನೀಡುವಂತೆ ನಾಗರಿಕರು, ಸಂಘಸಂಸ್ಥೆಗಳು, ವರ್ತಕರು, ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೇರಳ ಮುಖ್ಯಮಂತ್ರಿ ಜತೆಗೆ ಮಾತನಾಡಿದ್ದು, ಪರಿಹಾರ ಕಾರ್ಯಾಚರಣೆಗೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಅಭಯ ನೀಡಿದ್ದಾರೆ.
ಪರಿಹಾರ ಕಾರ್ಯಕ್ಕಾಗಿ ಕೇರಳ ರಾಜ್ಯ ಸರ್ಕಾರಕ್ಕೆ ತಕ್ಷಣ ₹1 ಕೋಟಿ ನೆರವು ನೀಡುವುದಾಗಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಘೋಷಿಸಿದ್ದಾರೆ.
ಕಳೆದ 50 ವರ್ಷಗಳಲ್ಲಿ ಸಂಭವಿಸಿದ ಮಹಾಮಳೆಗೆ ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರಸ್ತೆ, ಸೇತುವೆ, ಕಟ್ಟಡಗಳು ಕೊಚ್ಚಿ ಹೋಗಿವೆ. ರಾಜ್ಯದ 14 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಭಾರೀ ಪ್ರವಾಹದಿಂದ ಜನರು ನೆಲೆ ಕಳೆದುಕೊಂಡಿದ್ದಾರೆ.
ಅಲಪುಳ, ಎರ್ನಾಕುಲಂ, ಕೊಟ್ಟಾಯಂ, ಮಲಪ್ಪುರಂ, ಕಲ್ಲಿಕೋಟೆ ಮತ್ತು ಪಾಲಕ್ಕಾಡ್‌ನಲ್ಲಿ ಪ್ರವಾಹ ಮುಂದುವರಿದಿದೆ. ಆಗಸ್ಚ್ 14ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ
ಪ್ರವಾಹದ ನಡುವೆ ಸಿಲುಕಿದ್ದ ಜನರನ್ನು ಭೂಸೇನೆ, ವಾಯು ಸೇನೆ, ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.
ಪ್ರಸಿದ್ಧ ಪ್ರವಾಸಿ ತಾಣ ಮುನ್ನಾರ್‌ನ ರೆಸಾರ್ಟ್‌ನಲ್ಲಿ ಸಿಲುಕಿದ್ದ ರಷ್ಯಾ, ಅಮೆರಿಕ, ಸೌದಿಅರೆಬಿಯಾ ಹಾಗೂ ಒಮನ್ ದೇಶಗಳ 20 ಪ್ರವಾಸಿಗರು ಸೇರಿದಂತೆ 50 ಪ್ರವಾಸಿಗರನ್ನು ಸೇನಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಪೆರಿಯಾರ್ ನದಿಯ ಪ್ರವಾಹಕ್ಕೆ ಸಿಲುಕಿದ್ದ 55 ನಾಗರಿಕರನ್ನು ನೌಕಾಪಡೆಯು ‘ಆಪರೇಷನ್ ಮದದ್’ ಕಾರ್ಯಾಚರಣೆಯಿಂದ ರಕ್ಷಿಸಿದೆ. ರಕ್ಷಿಸಲ್ಪಟ್ಟವರೆಲ್ಲರೂ ನಿರಾಶ್ರಿತರ ಶಿಬಿರ ಮತ್ತು ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ್ದ ಖ್ಯಾತ ನಟ ಮಮ್ಮೂಟ್ಟಿ ‘ನೀವು ಹೆದರ ಬೇಡಿ, ನಾವು ಮತ್ತು ಹಲವರು ನಿಮ್ಮೊಂದಿಗೆ ಇದ್ದೇವೆ’ ಎಂದು ನಿರಾಶ್ರಿತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಪರಿಹಾರಕ್ಕೆ ಕೈಜೋಡಿಸಿ: ರಾಹುಲ್ ಮನವಿ
ಕೇರಳ ರಾಜ್ಯ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತುತ್ತಾಗಿದೆ. ಭಾರತೀಯ ಸೇನೆ ಮತ್ತು ಎನ್‌ಡಿಆರ್‌ಎಫ್ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಪಕ್ಷದ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಸೂಚನೆ ನೀಡಿದ್ದಾರೆ.
‘ಕೇರಳದಲ್ಲಿ ಪ್ರಕೃತಿ ಮಾತೆ ನಿಜಕ್ಕೂ ಮುನಿದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸಂತ್ರಸ್ತರ ನೆರವಿಗೆ ಕಾಂಗ್ರೆಸ್ ಸದಾ ಇದ್ದು, ಕೂಡಲೇ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಅಪಾಯದಲ್ಲಿರುವವರರನ್ನು ರಕ್ಷಿಸಿ, ಅವರಿಗೆ ನೆರವಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಮುಖ್ಯಾಂಶ
* ಪ್ರವಾಹದಲ್ಲಿ ಮೃತಪಟ್ಟವರಿಗೆ ತಲಾ ₹10 ಲಕ್ಷ, ಸಂತ್ರಸ್ತರಾದವರಿಗೆ ತಲಾ ₹4 ಲಕ್ಷ ಪರಿಹಾರ ಘೋಷಣೆ
* ಇಡುಕ್ಕಿಯಲ್ಲಿ ಆಗಸ್ಟ್ 13ರವರೆಗೆ ಮತ್ತು ವಯನಾಡಿನಲ್ಲಿ ಆಗಸ್ಟ್ 14ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ
* ರಾಜ್ಯದ 40 ನದಿಗಳು ಬಹುತೇಕ ಉಕ್ಕಿ ಹರಿಯುತ್ತಿವೆ
* 58 ಜಲಾಶಯಗಳ ಪೈಕಿ 24 ಜಲಾಶಯಗಳು ಗರಿಷ್ಠ ಸಂಗ್ರಹ ಮಟ್ಟ ತಲುಪಿದ್ದು, ನೀರು ಹೊರ ಬಿಡಲಾಗುತ್ತಿದೆ
* ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕೆ ಮೊದಲ ಬಾರಿಗೆ ನೌಕಾಪಡೆ ಮಹಿಳಾ ಕಮಾಂಡೋ ನಿಯೋಜಿಸಿದೆ
ಅಂಕಿ ಅಂಶ
54,000
ಪ್ರವಾಹದಿಂದ ಇದುವರೆಗೆ ನೆಲೆ ಕಳೆದುಕೊಂಡವರ ಸಂಖ್ಯೆ
500
ರಾಜ್ಯದಾದ್ಯಂತ ತೆರೆದಿರುವ ಪುನರ್ವಸತಿ ಶಿಬಿರ ಮತ್ತು ಗಂಜಿ ಕೇಂದ್ರಗಳು
29
ಮಳೆಯ ಆರ್ಭಟಕ್ಕೆ ಇದುವರೆಗೆ ಬಲಿಯಾದ ಜನರು
**
ಪರಿಸ್ಥಿತಿ ನಿಭಾಯಿಸಲು ಭೂಸೇನೆ, ನೌಕಾಪಡೆ, ವಾಯುಪಡೆ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕೂಡ ಕೈಜೋಡಿಸಿದೆ.
–ಕೆ.ಜೆ. ಅಲ್ಫಾನ್ಸೋ, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.