ADVERTISEMENT

ಕೇರಳ | ಚಾಲನಾ ಪರವಾನಗಿ ಪರೀಕ್ಷೆ ಪರಿಷ್ಕರಣೆ: ಪ್ರತಿಭಟನೆ

ಪಿಟಿಐ
Published 2 ಮೇ 2024, 15:04 IST
Last Updated 2 ಮೇ 2024, 15:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತಿರುವನಂತಪುರ: ಚಾಲನಾ ಪರವಾನಗಿ ಪರೀಕ್ಷಾ ವಿಧಾನವನ್ನು ಪರಿಷ್ಕರಿಸಿರುವ ಕೇರಳ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯದ ಡ್ರೈವಿಂಗ್‌ ಸ್ಕೂಲ್‌ಗಳ ಒಕ್ಕೂಟದ ಸದಸ್ಯರು ಗುರುವಾರ ರಾಜ್ಯದಾದ್ಯಂತ ಮುಷ್ಕರ ನಡೆಸಿದರು.

ಕೇರಳ ಸರ್ಕಾರವು ಹೊಸ ನಿಯಮಗಳ ಮೂಲಕ ಚಾಲನಾ ಪರವಾನಗಿ ಪಡೆಯುವುದನ್ನು ಇನ್ನಷ್ಟು ಕಠಿಣಗೊಳಿಸಿದ್ದು, ಆಕಾಂಕ್ಷಿಗಳಿಗೆ ಸವಾಲಾಗಿ ಪರಿಣಮಿಸಲಿದೆ ಎಂದು ಒಕ್ಕೂಟ ದೂರಿದೆ.

ADVERTISEMENT

ಕೇರಳದ ಮೋಟಾರು ವಾಹನ ಇಲಾಖೆಯು ಈ ಸುತ್ತೋಲೆಯನ್ನು ಹಿಂಪಡೆಯುವವರೆಗೂ ಧರಣಿ ಮುಂದುವರಿಸುವುದಾಗಿ ತಿಳಿಸಿದ ಒಕ್ಕೂಟದ ಸದಸ್ಯರು, ತಿರುವನಂತಪುರ ಮತ್ತು ಇತರ ಪರೀಕ್ಷಾ ಮೈದಾನಗಳಲ್ಲಿ ಚಾಲನಾ ಪರವಾನಗಿ ಪರೀಕ್ಷೆ ಎದುರಿಸಲು ಬಂದಿದ್ದ ಅಭ್ಯರ್ಥಿಗಳಿಗೆ ಅಡ್ಡಿಪಡಿಸಿದ್ದಾರೆ.

ಕೇರಳ ಮೋಟಾರು ವಾಹನ ಇಲಾಖೆಯು ಹೊಸ ಸುಧಾರಣೆಗಳನ್ನು ಒಳಗೊಂಡ ಸುತ್ತೋಲೆಯನ್ನು ಮೇ 2ರಿಂದ ಜಾರಿಗೆ ತಂದಿದೆ.  

‘ಚಾಲನಾ ಪರವಾನಗಿಗೆ ಸಂಬಂಧಿಸಿದ ಹೊಸ ಸುಧಾರಣೆಗಳಿಗೆ ನಮ್ಮ ವಿರೋಧ ಇಲ್ಲ. ಆದರೆ ಅದರ ಅನುಷ್ಠಾನಕ್ಕೆ ಹೆಚ್ಚಿನ ಸಮಯ ಬೇಕಿದೆ. ಹೊಸ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ನಮಗೆ ಯಾವುದೇ ರೀತಿಯ ತರಬೇತಿ ನೀಡಿಲ್ಲ. ಅಲ್ಲದೆ ಅದಕ್ಕೆ ಬೇಕಿರುವ ಅಗತ್ಯ ಮೂಲ ಸೌಕರ್ಯವನ್ನೂ ಇಲಾಖೆ ಕಲ್ಪಿಸಿಲ್ಲ’ ಎಂದು ಡ್ರೈವಿಂಗ್‌ ಸ್ಕೂಲ್‌ ಮಾಲೀಕರ ಸಂಘದ ಸದಸ್ಯ ಉನ್ನಿ ತಿಳಿಸಿದರು.

‘ಚಾಲನಾ ಕಲಿಕೆ ಮತ್ತು ಪರೀಕ್ಷೆಗೆ ಬಳಸುವ ವಾಹನಗಳಿಗೆ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಅಳವಡಿಸಬೇಕು ಮತ್ತು ಪರೀಕ್ಷೆ, ಕಲಿಕೆಗೆ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ನಿಷೇಧಿಸಲಾಗಿದೆ. ಇದು ಸರಿಯಲ್ಲ. ಈ ನಿಯಮಗಳನ್ನು ನಾವು ಪ್ರಮುಖವಾಗಿ ವಿರೋಧಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ರಾಜ್ಯದ ಎಲ್ಲ 84 ಪರೀಕ್ಷಾ ಕೇಂದ್ರಗಳಲ್ಲಿಯೂ ಒಂದೇ ರೀತಿಯ ಸೌಲಭ್ಯಗಳು ಇರಬೇಕು ಮತ್ತು ಎಲ್ಲ ಕೇಂದ್ರಗಳಲ್ಲಿಯೂ ನಡೆಯುವ ಪರೀಕ್ಷೆಗಳು ಏಕರೂಪವಾಗಿರಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ನಾವು ಇಲಾಖೆಯ ಸುತ್ತೋಲೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಹೀಗಿರುವಾಗ ಸರ್ಕಾರ ತರಾತುರಿಯಲ್ಲಿ ಇದನ್ನು ಜಾರಿಗೊಳಿಸುವ ಅಗತ್ಯವೇನಿದೆ. ಹೈಕೋರ್ಟ್‌ ತೀರ್ಪು ಬರುವವರೆಗೆ ಕಾಯಬಹುದಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು. 

ಸುತ್ತೋಲೆಯಲ್ಲಿ ಏನಿದೆ

ಕೇರಳ ಮೋಟಾರು ವಾಹನಗಳ ಇಲಾಖೆಯು ಚಾಲನಾ ಪರವಾನಗಿ ಪರೀಕ್ಷಾ ಷರತ್ತುಗಳನ್ನು ತಿದ್ದುಪಡಿ ಮಾಡಿ 2024ರ ಏಪ್ರಿಲ್‌ 4ರಂದು ಸುತ್ತೋಲೆ ಹೊರಡಿಸಿತ್ತು. ಅದರಲ್ಲಿರುವ ಪ್ರಮುಖ ಅಂಶಗಳೆಂದರೆ

* ಅರ್ಜಿದಾರರು ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ರಸ್ತೆ ಪರೀಕ್ಷೆಯನ್ನು ಕಡ್ಡಾಯವಾಗಿ ಎದುರಿಸಬೇಕು. ಮೈದಾನದಲ್ಲಿ ‘ಎಚ್‌’ ಟೆಸ್ಟ್‌ಗೂ ಮುನ್ನ ಕೋನೀಯ ಪಾರ್ಕಿಂಗ್‌ ಸಮಾನಾಂತರ ಪಾರ್ಕಿಂಗ್‌ ಜಿಗ್‌–ಜಾಗ್ ಡ್ರೈವಿಂಗ್‌ ‘ಗ್ರೇಡಿಯಂಟ್‌ ಟೆಸ್ಟ್’ಗಳಿಗೆ ಒಳಪಡಬೇಕು.

* ದಿನಕ್ಕೆ ಕೇವಲ 30 ಚಾಲನಾ ಪರೀಕ್ಷೆಗಳನ್ನು (20 ಹೊಸಬರಿಗೆ ಮತ್ತು ವಿಫಲಗೊಂಡ ಅಭ್ಯರ್ಥಿಗಳಿಗೆ 10) ನಡೆಸಲಾಗುತ್ತದೆ.

* ದ್ವಿಚಕ್ರ ವಾಹನ ಚಾಲನಾ ಪರವಾನಗಿಗೆ 95 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಗೇರ್‌ ಪೆಡಲ್‌ ವಾಹನವನ್ನು ಮಾತ್ರ ಪರಿಗಣಿಸಲಾಗುತ್ತದೆ.

* ನಾಲ್ಕು ಚಕ್ರಗಳ ವಾಹನದ ಚಾಲನಾ ಪರೀಕ್ಷೆಗೆ ಯಾವುದೇ ಎಲೆಕ್ಟ್ರಿಕ್‌ ಕಾರುಗಳು ಅಥವಾ ಸ್ವಯಂ ಚಾಲಿತ (ಗೇರು ರಹಿತ) ಕಾರುಗಳನ್ನು ಪರಿಗಣಿಸುವುದಿಲ್ಲ.

* ಪರೀಕ್ಷೆಗೆ ಬಳಸುವ ವಾಹನಗಳಲ್ಲಿ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಮತ್ತು ವಾಹನದ ಸ್ಥಳ ಟ್ರ್ಯಾಕಿಂಗ್‌ ಸಾಧನ ಕಡ್ಡಾಯವಾಗಿ ಅಳವಡಿಸಿರಬೇಕು.

* ಚಾಲನಾ ಬೋಧಕರು ಕ್ಯಾಮೆರಾವನ್ನು ಬಳಸಿಕೊಂಡು ಪರೀಕ್ಷೆಯನ್ನು ರೆಕಾರ್ಡ್‌ ಮಾಡಬೇಕು ಮತ್ತು ಮೆಮೊರಿ ಕಾರ್ಡ್‌ ಅನ್ನು ಮೋಟಾರು ವಾಹನಗಳ ಇನ್ಸ್‌ಪೆಕ್ಟರ್‌ ಬಳಿಕೊಡಬೇಕು.

* ಮೆಮೊರಿ ಕಾರ್ಡ್ ದತ್ತಾಂಶವನ್ನು ಎಂವಿಡಿ ಸಿಸ್ಟಮ್‌ಗೆ ವರ್ಗಾಯಿಸಲಾಗುತ್ತದೆ. ವಾಹನ ಮಾಲೀಕರು ಮುಂದಿನ ಮೂರು ತಿಂಗಳವರೆಗೆ ಈ ಮೆಮೊರಿ ಕಾರ್ಡ್‌ ಅನ್ನು ಹಾಗೇಯೇ ಉಳಿಸಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.