ADVERTISEMENT

ಅಧಿಕ ಕೀಟನಾಶಕ: ಗುರುವಾಯೂರ್ ದೇವಾಲಯದಲ್ಲಿ ‘ತುಳಸಿ’ ನಿಷೇಧ

ಅರ್ಜುನ್ ರಘುನಾಥ್
Published 27 ಅಕ್ಟೋಬರ್ 2024, 14:50 IST
Last Updated 27 ಅಕ್ಟೋಬರ್ 2024, 14:50 IST
<div class="paragraphs"><p>ತುಳಸಿ</p></div>

ತುಳಸಿ

   

ತಿರುವನಂತಪುರ: ಭಗವಾನ್ ಶ್ರೀಕೃಷ್ಣನಿಗೆ ‘ತುಳಸಿ’ ಪ್ರಿಯವಾಗಿದ್ದರೂ, ಬೆಳೆಯುವಾಗ ಕೀಟನಾಶಕವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ, ಕೇರಳದ ತ್ರಿಶ್ಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ನಿಷೇಧಿಸಲಾಗಿದೆ.

‘ತುಳಸಿ’ಯನ್ನು ಬಳಸುತ್ತಿದ್ದ ದೇಗುಲದ ಸಿಬ್ಬಂದಿಯು ಅಲರ್ಜಿ, ತುರಿಕೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಆಗಾಗ್ಗೆ ದೂರುತ್ತಿದ್ದರು. ಇದರಿಂದ ದೇಗುಲದ ಆಡಳಿತ ಮಂಡಳಿಯು ‘ತುಳಸಿ’ಯನ್ನು ಬಳಸದಂತೆ ಭಕ್ತರಿಗೆ ಸಲಹೆ ನೀಡಿದೆ.

ADVERTISEMENT

ಕೀಟನಾಶಕರಹಿತವಾಗಿ ಬೆಳೆದ ‘ತುಳಸಿ’ಯನ್ನು ಪೂಜೆಗಾಗಿ ಪಡೆಯಬಹುದಾದ ವ್ಯವಸ್ಥೆಯನ್ನು ಪರಿಚಯಿಸಿದೆ.

‘ವಾಣಿಜ್ಯ ಉದ್ದೇಶಕ್ಕಾಗಿಯೂ ‘ತುಳಸಿ’ಯನ್ನು ಬೆಳೆಯಲಾಗುತ್ತಿದ್ದು, ಅತಿಯಾಗಿ ಕೀಟನಾಶಕ ಬಳಸಲಾಗುತ್ತಿದೆ. ಹೆಚ್ಚು ದಿನ ಸಂರಕ್ಷಿಸಿ ಇಡಲೂ ಕ್ರಿಮಿನಾಶಕ ಬಳಕೆ ಆಗುತ್ತಿದೆ. ಅಂಗಡಿಗಳಲ್ಲಿ ಸಿಗುವ ಇಂತಹ ‘ತುಳಸಿ’ಯನ್ನೇ ಬಹುತೇಕ ಭಕ್ತರು ಖರೀದಿಸಿ, ಪೂಜೆಗಾಗಿ ಅರ್ಪಿಸುತ್ತಿದ್ದಾರೆ. ಇದನ್ನು ನಿರಂತರವಾಗಿ ಬಳಸುವ ಸಿಬ್ಬಂದಿಯು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದರಿಂದ, ದೇಗುಲದಲ್ಲಿ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ’ ಎಂದು ದೇವಾಲಯದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ನಿರ್ಧಾರವನ್ನು ಕೆಲವು ಹಿಂದೂ ಸಂಘಟನೆಗಳು ಖಂಡಿಸಿದ್ದು, ಆಡಳಿತಾರೂಢ ಸಿಪಿಎಂ ಸರ್ಕಾರದ ವಿರುದ್ಧ ಕಿಡಿಕಾರಿವೆ.

‘ಹಲವು ತಿಂಗಳ ಹಿಂದೆಯೇ ‘ತುಳಸಿ’ಯ ನಿರ್ಬಂಧವನ್ನು ಜಾರಿಗೊಳಿಸಲಾಗಿದೆ. ಕೆಲವರು ಇದೀಗ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರಷ್ಟೇ’ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ವಿ.ಕೆ. ವಿಜಯನ್‌ ತಿಳಿಸಿದರು.

24 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ನಂತರ, ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌–ಕಣಗಿಲು ಜಾತಿಗೆ ಸೇರಿದ ಹೂವು) ಬಳಸುವುದನ್ನು ನಿಲ್ಲಿಸಲು ಈ ಹಿಂದೆಯೇ ತೀರ್ಮಾನಿಸಿದೆ.

ಏಲಕ್ಕಿಯಲ್ಲಿ ಕೀಟನಾಶಕದ ಪ್ರಮಾಣವು ಅನುಮತಿಗಿಂತ ಹೆಚ್ಚಿತ್ತು ಎಂಬ ದೂರು ದಾಖಲಾಗಿದ್ದಕ್ಕೆ, ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಜನಪ್ರಿಯ ‘ಅರವಣ’ ಪ್ರಸಾದದ 6.65 ಲಕ್ಷ ಕಂಟೇನರ್‌ಗಳನ್ನು ಬಳಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.