ADVERTISEMENT

ನೀರಿನ ಬಿಕ್ಕಟ್ಟು: ಬೆಂಗಳೂರಿನ ಐಟಿ ಸಂಸ್ಥೆಗಳಿಗೆ ಕೇರಳ ಗಾಳ

ಪಿಟಿಐ
Published 27 ಮಾರ್ಚ್ 2024, 16:32 IST
Last Updated 27 ಮಾರ್ಚ್ 2024, 16:32 IST
   

ತಿರುವನಂತಪುರ: ಬೆಂಗಳೂರಿನಲ್ಲಿ ನೀರಿನ ಬಿಕಟ್ಟು ತೀವ್ರವಾಗಿರುವ ಕಾರಣ ಇಲ್ಲಿನ ಐಟಿ ಸಂಸ್ಥೆಗಳನ್ನು ಓಲೈಸಿ, ತನ್ನ ರಾಜ್ಯಕ್ಕೆ ಕರೆದೊಯ್ಯುವ ಯತ್ನದಲ್ಲಿ ಕೇರಳ ತೊಡಗಿದೆ. ಈ ಮೂಲಕ ಅದು ಕೇರಳಕ್ಕೆ ಹೆಚ್ಚಿನ ಐಟಿ ಸಂಸ್ಥೆಗಳನ್ನು ಆಕರ್ಷಿಸುವ ಕಾರ್ಯವನ್ನು ವಿಸ್ತರಿಸಲು ಯೋಜಿಸಿದೆ.

ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಮುಂದಾಗಿರುವ ಬೆಂಗಳೂರಿನ ಐಟಿ ಕಂಪನಿಗಳ ಜತೆ ಚರ್ಚಿಸಲು ರಾಜ್ಯದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುವುದು ಎಂದು ಕೇರಳ ಕೈಗಾರಿಕಾ ಸಚಿವ ಪಿ. ರಾಜೀವ್‌ ಹೇಳಿದ್ದಾರೆ.

‘ಬೆಂಗಳೂರು ಮೂಲದ ಹಲವು ಐಟಿ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲು ಆಯ್ಕೆಗಳ ಹುಡುಕಾಟದಲ್ಲಿವೆ. ಅಂಥ ಕಂಪನಿಗಳಿಗೆ ಕೇರಳ ರಾಜ್ಯದಲ್ಲಿನ ಅನುಕೂಲಕರ ಅಂಶಗಳನ್ನು ಮನದಟ್ಟು ಮಾಡಿಸಲು ಯತ್ನಿಸಲಾಗುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ನಾವು ಕೇರಳದಲ್ಲಿ ನೀರಿನ ಲಭ್ಯತೆಯನ್ನು ಹೊಂದಿರುವುದು, ಅನುಕೂಲಕರ ಅಂಶವಾಗಿದೆ’ ಎಂದು ರಾಜೀವ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. 

ADVERTISEMENT

‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ತಿರುವನಂತಪುರವನ್ನು ದೇಶದ ಐಟಿ ಕೇಂದ್ರವನ್ನಾಗಿ ಮಾಡಲಾಗುವುದು’ ಎಂದು ತಿರುವನಂತಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಐಟಿ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಇತ್ತೀಚೆಗೆ ಘೋಷಿಸಿದ್ದರು.

ಕೇರಳವು ತಿರುವನಂತಪುರ, ಕೊಚ್ಚಿ ಮತ್ತು ಕೋಯಿಕ್ಕೋಡ್‌ನಲ್ಲಿ ಮೂರು ಪ್ರಮುಖ ಐಟಿ ಪಾರ್ಕ್‌ಗಳನ್ನು ಹೊಂದಿದೆ. ಅಲ್ಲದೆ ಹಲವು ಜಿಲ್ಲೆಗಳಲ್ಲಿ ಪ್ರಾದೇಶಿಕ ಐಟಿ ಪಾರ್ಕ್‌ಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.