ADVERTISEMENT

Wayanad Landslide | ವಯನಾಡ್‌ನಲ್ಲಿ ಮರಣ ಮೃದಂಗ

ಅಮ್ಮಂದಿರ ತೆಕ್ಕೆಯಲ್ಲೇ ಚಿರನಿದ್ರೆಗೆ ಜಾರಿದ ಕಂದಮ್ಮಗಳು l ಸಾವಿನ ಸಂಖ್ಯೆ ಏರುವ ಅಪಾಯ l ನೂರಕ್ಕೂ ಅಧಿಕ ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
ಪಿಟಿಐ
Published 31 ಜುಲೈ 2024, 0:30 IST
Last Updated 31 ಜುಲೈ 2024, 0:30 IST
<div class="paragraphs"><p>ದುರಂತದ ತೀವ್ರತೆಗೆ ಸಾಕ್ಷಿಯಾದ ಬೇರು ಸಹಿತ ಉರುಳಿ ಬಿದ್ದ ಮರಗಳ ರಾಶಿ </p></div>

ದುರಂತದ ತೀವ್ರತೆಗೆ ಸಾಕ್ಷಿಯಾದ ಬೇರು ಸಹಿತ ಉರುಳಿ ಬಿದ್ದ ಮರಗಳ ರಾಶಿ

   

–ಪಿಟಿಐ ಚಿತ್ರ

ವಯನಾಡ್/ತಿರುವನಂತಪುರ (ಕೇರಳ): ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ 123 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಏರುವ ಅಪಾಯವಿದೆ.

ADVERTISEMENT

ಭೀಕರ ದುರಂತದಿಂದಾಗಿ ಜಿಲ್ಲೆಯ ಮೇಪ್ಪಾಡಿ ಪಟ್ಟಣ ವ್ಯಾಪ್ತಿಯ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ ಹಾಗೂ ಸಮೀಪದ ನೂಲ್ಪುಳ ಗ್ರಾಮಗಳು ಅಕ್ಷರಶಃ ಕೊಚ್ಚಿಹೋಗಿವೆ. ಸೋಮವಾರದವರೆಗೂ ಹಸಿರುಹೊದ್ದು ಮಲಗಿ ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಈ ಗ್ರಾಮಗಳು ಸ್ಮಶಾನ ಸದೃಶವಾಗಿ ಬದಲಾಗಿದ್ದು, ಹೊರಲೋಕದ ಸಂಪರ್ಕವನ್ನೇ ಕಡಿದುಕೊಂಡಿವೆ.

ಗ್ರಾಮಸ್ಥರು ಮಲಗಿದ್ದಾಗ ಭೂಕುಸಿತ ಸಂಭವಿಸಿದ್ದು ಸಾವಿನ ಸಂಖ್ಯೆ ಹೆಚ್ಚಲು ಕಾರಣ. ಸಿಹಿ ನಿದ್ದೆಯಲ್ಲಿದ್ದ ಹಲವು ಕುಟುಂಬಗಳು ನಿರ್ನಾಮವಾಗಿವೆ. ಅಮ್ಮನ ತೆಕ್ಕೆಯಲ್ಲಿ ಮಲಗಿದ್ದ ಕಂದಮ್ಮಗಳು, ಮಕ್ಕಳು ಮಣ್ಣನಡಿ ಸಮಾಧಿಯಾಗಿವೆ. ಕೆಸರು ಮೆತ್ತಿಕೊಂಡ ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಎತ್ತಿಕೊಂಡು ಹೋದ ದೃಶ್ಯ ದುರಂತದ ತೀವ್ರತೆಗೆ ಸಾಕ್ಷಿಯಾಗಿದೆ. ಹಲವು ಮೃತದೇಹಗಳು ಅಂಗಾಂಗ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಭೂಕುಸಿತಕ್ಕೆ ಭಾರಿ ಮಳೆಯೇ ಕಾರಣ ಎಂದು ಕೇರಳ ಸರ್ಕಾರದ ಮೂಲಗಳು ತಿಳಿಸಿವೆ. ವಯನಾಡ್‌ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದಲೂ ಭಾರಿ ಮಳೆಯಾಗುತ್ತಿದೆ. 

ಮಳೆ ಧಾರಾಕಾರವಾಗಿ ಸುರಿಯುತ್ತಿದ್ದಂತೆಯೇ ಭೂಕುಸಿತ ಉಂಟಾದ್ದರಿಂದ ಏನಾಗುತ್ತಿದೆ ಎಂಬುದೇ ಹೆಚ್ಚಿನವರಿಗೆ ತಿಳಿಯಲಿಲ್ಲ. ಭಾರಿ ಶಬ್ದ ಕೇಳಿ ನಿದ್ದೆಯಿಂದ ಎಚ್ಚೆತ್ತಾಗ ಹಲವರ ಕುತ್ತಿಗೆಯವರೆಗೂ ಕೆಸರು ಮತ್ತು ನೀರು ಬಂದಿತ್ತು. ಈ ವೇಳೆ ವಿದ್ಯುತ್‌ ಸಂಪರ್ಕವೂ ಕಡಿತಗೊಂಡಿತ್ತು. ಗ್ರಾಮಸ್ಥರಿಗೆ ಬೆಳಕು ಹರಿದ ಬಳಿಕವಷ್ಟೇ ದುರಂತ ಏನು ಎಂಬುದು ಅರಿವಿಗೆ ಬಂತು. ‘ಭೂಕುಸಿತದಲ್ಲಿ 128 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 34 ಮಂದಿಯನ್ನು ಗುರುತಿಸಲಾಗಿದ್ದು, 18 ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಕುಸಿದ ಮನೆಗಳ ಅವಶೇಷಗಳಡಿ ಸಿಕ್ಕಿಬಿದ್ದ ಹಲವರು ಫೋನ್‌ ಕರೆ ಮಾಡಿ ಸಹಾಯಕ್ಕಾಗಿ ಅಂಗಾಲಾಚಿದ್ದು, ದುರಂತದ ತೀವ್ರತೆಯನ್ನು ಎತ್ತಿತೋರಿಸಿದೆ. ಘಟನೆ ಸ್ಥಳದ ಹೃದಯ ವಿದ್ರಾವಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ಬುಡಸಮೇತ ಉರುಳಿಬಿದ್ದ ಮರಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿ ಒಂದೆಡೆ ರಾಶಿ ಬಿದ್ದಿರುವುದು, ಅವುಗಳ ನಡುವೆ ಸಿಲುಕಿರುವ ವಾಹನಗಳು, ಮನೆಗಳ ಅವಶೇಷ, ಅಲ್ಲಲ್ಲಿ ಬಿದ್ದಿದ್ದ ಮೃತದೇಹಗಳು ಭೂಕುಸಿತದ ಭೀಕರತೆಯನ್ನು ತೆರೆದಿಟ್ಟಿವೆ.

ಇರುವಳ್ಳಿಪುಳ ನದಿ ತನ್ನ ದಿಕ್ಕು ಬದಲಿಸಿ ಜನವಸತಿ ಪ್ರದೇಶದಲ್ಲಿ ಹರಿದದ್ದು ಹಾನಿಯ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಈ ನದಿ ಈಗ ಎರಡು ಭಾಗಗಳಾಗಿ ಹರಿಯುತ್ತಿದೆ.

ಭೂಸೇನೆ, ವಾಯುಪಡೆ, ಎನ್‌ಡಿಆರ್‌ಎಫ್‌ ಸೇರಿದಂತೆ ಹಲವು ತಂಡಗಳು ರಕ್ಷಣಾ ಕಾರ್ಯಕ್ಕೆ ಧುಮುಕಿವೆ. ವಿವಿಧ ಸಂಘಟನೆಗಳ ಸ್ವಯಂಸೇವಕರು ಮತ್ತು ಸ್ಥಳೀಯರು ಕೂಡಾ ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಬೆಟ್ಟದಿಂದ ಉರುಳಿರುವ ಬೃಹತ್‌ ಬಂಡೆಗಳು ರಕ್ಷಣಾ ಕಾರ್ಯಕ್ಕೆ ಸವಾಲಾಗಿ ಪರಿಣಮಿಸಿವೆ. 

ಅತಿಹೆಚ್ಚು ಹಾನಿ ಸಂಭವಿಸಿರುವ ಮುಂಡಕ್ಕೈ ಮತ್ತು ಚೂರಲ್‌ಮಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳೂ ಕೊಚ್ಚಿಹೋಗಿದ್ದು, ರಕ್ಷಣಾ ತಂಡದ ಸದಸ್ಯರು ದುರಂತ ನಡೆದ ಸ್ಥಳಕ್ಕೆ ತಲುಪಲು ತುಂಬಾ ಸಮಯ ತೆಗೆದುಕೊಂಡರು. ಮುಂಡಕ್ಕೈ ಗ್ರಾಮದಲ್ಲಿ ಕೆಲವು ಮನೆಗಳ ಅಡಿಪಾಯಗಳು ಮಾತ್ರ ಉಳಿದುಕೊಂಡಿವೆ.

ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಇಲ್ಲಿ ದೊರೆತ ಎಲ್ಲ ಮೃತದೇಹಗಳನ್ನು ಮೇಪ್ಪಾಡಿಗೆ ಸಾಗಿಸಲು ರಾತ್ರಿಯವರೆಗೂ ಸಾಧ್ಯವಾಗಿಲ್ಲ. ಮೃತದೇಹಗಳನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿ ಹಗ್ಗದ ನೆರವಿನಿಂದ ನದಿಯ ಇನ್ನೊಂದು ಕಡೆಗೆ ಸಾಗಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹೆಲಿಕಾಪ್ಟರ್‌ ಬಳಕೆ:

ರಕ್ಷಣಾ ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಪ್ಟರ್‌ಅನ್ನು ಬಳಸಲಾಗಿದೆ. ಚೂರಲ್‌ಮಲ ಗ್ರಾಮದಲ್ಲಿ ಹಾನಿಗೊಂಡಿದ್ದ ರಸ್ತೆಯಲ್ಲಿ ಅತ್ಯಂತ ಸಾಹಸದಿಂದ ಹೆಲಿಕಾಪ್ಟರ್‌ ಇಳಿಸಿದ ವಾಯುಪಡೆ ಸಿಬ್ಬಂದಿ, ಗಾಯಾಳುಗಳನ್ನು ಅಲ್ಲಿಂದ ರಕ್ಷಿಸಿದ್ದಾರೆ.

ಬೆಳಿಗ್ಗೆಯಿಂದ ಪ್ರತಿಕೂಲ ಹವಾಮಾನ ಇದ್ದ ಕಾರಣ ಹೆಲಿಕಾಪ್ಟರ್‌ ಬಳಕೆ ಸಾಧ್ಯವಾಗಲಿಲ್ಲ. ಸಂಜೆಯ ವೇಳೆಗೆ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ಸಾಧ್ಯವಾಗಿದೆ.

ನೆರೆ ಜಿಲ್ಲೆಗೆ ಕೊಚ್ಚಿಹೋದ ಮೃತದೇಹಗಳು...

ಭೂಕುಸಿತದಲ್ಲಿ ದಾರುಣ ಅಂತ್ಯ ಕಂಡವರ ಮೃತದೇಹಗಳು ನದಿಯಲ್ಲಿ ಸುಮಾರು 40 ಕಿ.ಮೀ ದೂರ ಸಾಗಿ, ನೆರೆಯ ಮಲಪ್ಪುರ ಜಿಲ್ಲೆಯಲ್ಲಿ ಪತ್ತೆಯಾಗಿವೆ. ‘ಮಲಪ್ಪುರಂನ ಪೋತ್ತುಕಲ್‌ ಗ್ರಾಮದಲ್ಲಿ ಚಾಲಿಯಾರ್ ನದಿಯಲ್ಲಿ 16 ಮೃತದೇಹಗಳು ಪತ್ತೆಯಾಗಿವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಶೋಧ ಕಾರ್ಯದಲ್ಲಿ ತೊಡಗಿರುವವರಿಗೆ ಮಾನವನ ದೇಹದ ಅಂಗಗಳೂ ದೊರೆತಿವೆ ಎಂದರು.‌ 

ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳ ನಿಯೋಜನೆ

ನವದೆಹಲಿ: ಭೂ ಕುಸಿತದಿಂದ ತತ್ತರಿಸಿರುವ ವಯನಾಡ್‌ನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದ್ದು, ಇದಕ್ಕಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಹಿರಿಯ ಐಎಎಸ್‌ ಅಧಿಕಾರಿ ಪಿ.ಸಿ. ಜಾಫರ್‌ (ಮೊಬೈಲ್‌– 9448355577) ಹಾಗೂ ದಿಲೀಶ್‌ ಶಶಿ (9446000514) ಅವರು ಪರಿಹಾರ ಕಾರ್ಯಾಚರಣೆಗಳ ಸಮನ್ವಯದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ವೈದ್ಯಕೀಯ ನೆರವು, ಆಸ್ಪತ್ರೆ ಸೌಲಭ್ಯ ಹಾಗೂ ಗಾಯಾಳುಗಳನ್ನು ಕರೆತರಲು ಎಚ್‌.ಡಿ. ಕೋಟೆಯಲ್ಲಿ ಬಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಚಾಮರಾಜನಗರ ಜಿಲ್ಲಾಡಳಿತವೂ ಜಿಲ್ಲೆಯ ಗಡಿಭಾಗದಿಂದ ವಯನಾಡ್‌ಗೆ ಆಗಾಗ ತೆರಳುವ ನಾಗರಿಕರ ನೆರವಿಗಾಗಿ ಸಹಾಯವಾಣಿ ಪ್ರಾರಂಭಿಸಿದೆ. ಸಹಾಯವಾಣಿ ಸಂಖ್ಯೆಗಳು: 08226-223163, 08226-223161, 08226-223160. ವಾಟ್ಸಾಪ್‌ ಸಂಖ್ಯೆ: 9740942901

ದುರಂತದ ಪ್ರಮುಖ ಅಂಶಗಳು

*2018ರ ಪ್ರವಾಹದ ಬಳಿಕ ಕೇರಳದಲ್ಲಿ ಸಂಭವಿಸಿದ ಅತಿದೊಡ್ಡ ಪ್ರಕೃತಿ ದುರಂತ

*ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದ ₹2 ಲಕ್ಷ ಪರಿಹಾರ ಘೋಷಣೆ. ಗಾಯಾಳುಗಳಿಗೆ ₹50 ಸಾವಿರ ಪರಿಹಾರ

*ವಯನಾಡ್‌ ಜಿಲ್ಲೆಯ 45 ಕಡೆ ಕಾಳಜಿ ಕೇಂದ್ರ ಆರಂಭ; ಇದುವರೆಗೆ 3,069 ಮಂದಿಗೆ ಆಶ್ರಯ

*ಹಲವು ಪ್ರವಾಸಿಗರು ಅವಶೇಷಗಳಡಿ ಸಿಲುಕಿರುವ ಆತಂಕ

*ತಾತ್ಕಾಲಿಕ ಸೇತುವೆ ನಿರ್ಮಿಸಿ ಸಾವಿರಕ್ಕೂ ಅಧಿಕ ಮಂದಿಯ ರಕ್ಷಣೆ

*ಎರಡು ದಿನಗಳ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರ. ಎಲ್ಲ ಮನರಂಜನಾ
ಕಾರ್ಯಕ್ರಮಗಳು ರದ್ದು

*ನೆರವಿನ ಹಸ್ತ ಚಾಚಿದ ಕರ್ನಾಟಕ, ತಮಿಳುನಾಡು. ರಕ್ಷಣಾ ಕಾರ್ಯಾಚರಣೆಗೆ ತಂಡವನ್ನು ಕಳುಹಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್; ಪರಿಹಾರ ಕಾರ್ಯಗಳಿಗೆ 
₹5 ಕೋಟಿ ಘೋಷಣೆ 

ಚಾಮರಾಜನಗರದ ಇಬ್ಬರ ಸಾವು

ಚಾಮರಾಜನಗರ: ಗುಡ್ಡ ಕುಸಿತದಲ್ಲಿ ಚಾಮರಾಜನಗರ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ.

ಮೇಪ್ಪಾಡಿಯಲ್ಲಿ ನೆಲೆಸಿದ್ದ ಪುಟ್ಟಸಿದ್ದಿ (62) ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚೂರಲ್‌ಮಲ ಗ್ರಾಮದಲ್ಲಿ ನೆಲಸಿದ್ದ ರಾಜನ್‌ ಹಾಗೂ ರಜನಿ, ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿಯಿಂದ ವಯನಾಡ್‌ನ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ತೆರಳಿದ್ದ ರತ್ನಮ್ಮ (45) ರಾಜೇಂದ್ರ (55) ದಂಪತಿ ನಾಪತ್ತೆಯಾಗಿದ್ದಾರೆ.

ರಾಜ್ಯ ಕಂಡಂತಹ ಅತ್ಯಂತ ಭೀಕರ ಪ್ರಕೃತಿ ವಿಕೋಪಗಳಲ್ಲಿ ಇದು ಒಂದಾಗಿದೆ. ಈ ಸಂಕಷ್ಟದಲ್ಲಿ ನೆರವಿಗೆ ಎಲ್ಲರೂ ಕೈಜೋಡಿಸಬೇಕು
-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ
ಭೂಕುಸಿತ ದುರಂತದ ಬಗ್ಗೆ ಕೇರಳ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ‍‍ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ
ನರೇಂದ್ರ ಮೋದಿ, ಪ್ರಧಾನಿ
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಸಾಧ್ಯ ಎಂದು ಭಾವಿಸಿದ್ದೇನೆ
ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.