ಕೊಚ್ಚಿ: ಕೆಲಸದ ಸ್ಥಳಗಳಲ್ಲಿ ‘ಜೆಂಡರ್ ಆಡಿಟ್’ (ಕಾರ್ಯಸ್ಥಳದಲ್ಲಿ ಇರುವ ಗಂಡಸರು ಹಾಗೂ ಮಹಿಳೆಯರ ಸಂಖ್ಯೆ ಹಾಗೂ ಕಾರ್ಯಕ್ಷಮತೆಯ ಪರಿಶೀಲನೆ) ನಡೆಸಲಾಗುವುದು. ಅಲ್ಲದೆ ಪುರುಷರಿಗೆ ತಕ್ಕಂತೆ ಮಹಿಳೆಯರಿಗೆ ಸಮಾನ ವೇತನ ನೀಡುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದರು.
ರಾಜ್ಯದ ಮಹಿಳೆಯರೊಂದಿಗೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉದ್ಯೋಗಗಳು ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿರಬೇಕು’ ಎಂದರು.
ತಮ್ಮ ಸರ್ಕಾರದ ಮಹಿಳಾಸ್ನೇಹಿ ನೀತಿಗಳ ಕುರಿತು ವಿವರಿಸಿದ ಅವರು, ‘ರಾಜ್ಯ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ನೀಡುವ ಮೂಲಕ ಕೇರಳವು ದೇಶಕ್ಕೆ ಮಾದರಿಯಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರವೂ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವತಿಯರ ಸಂಖ್ಯೆ ಹೆಚ್ಚಿದೆ’ ಎಂದರು.
1997ರಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ‘ಜೆಂಡರ್ ಬಜೆಟ್’ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹಿರಿಮೆಯೂ ಕೇರಳಕ್ಕಿದೆ ಎಂದು ಪಿಣರಾಯಿ ತಿಳಿಸಿದರು.
ಕೇಂದ್ರ ಸರ್ಕಾರ ಹೆಸರಿಗೆ ಮಾತ್ರ ‘ಜೆಂಡರ್ ಬಜೆಟ್’ ಅನುಸರಿಸತ್ತದೆ. ಆದರೆ ಇದರ ಅಂಕಿ ಅಂಶಗಳು ಒಮ್ಮೆಯೂ ಶೇ 6 ದಾಟಿಲ್ಲ ಎಂದು ಟೀಕಿಸಿದ ಪಿಣರಾಯಿ ವಿಜಯನ್, ಕೇರಳದಲ್ಲಿ ಈ ವರ್ಷದ ಒಟ್ಟು ಬಜೆಟ್‌ನಲ್ಲಿ ಶೇ 21.5ರಷ್ಟು ‘ಜೆಂಡರ್ ಬಜೆಟ್’ ಆಗಿದೆ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.