ತಿರುವನಂತಪುರ: ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ತಮ್ಮ ಕಾದಂಬರಿಯನ್ನು ಸಣ್ಣಕತೆಗಳ ಲೇಖಕ ಎಸ್.ಹರೀಶ್ ಅವರು ಹಿಂಪಡೆದಿದ್ದಾರೆ. ಬಲಪಂಥೀಯ ಸಂಘಟನೆಗಳಿಂದ ಬೆದರಿಕೆ ಬಂದಿರುವುದು ತಮ್ಮ ನಿರ್ಧಾರಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
‘ಲೇಖಕ ಹರೀಶ್ ಅವರು ‘ಮೀಶ’ ಎಂಬ ಕಾದಂಬರಿಯನ್ನು ಹಿಂಪಡೆದಿದ್ದಾರೆ. ಸಾಹಿತ್ಯದ ಮೇಲೆ ಗುಂಪುದಾಳಿ ನಡೆದಿದೆ. ಕೇರಳದ ಸಾಂಸ್ಕೃತಿಕ ಚರಿತ್ರೆಯಲ್ಲಿ ಇದು ಕರಾಳ ದಿನ’ ಎಂದು ಪತ್ರಿಕೆಯ ಸಂಪಾದಕ ಕಮಲ್‌ರಾಮ್ ಸಂಜೀವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಾವು ಹಾಗೂ ತಮ್ಮ ಕುಟುಂಬದ ಮೇಲೆ ಸೈಬರ್ ದಾಳಿ ನಡೆಯುತ್ತಿದ್ದು, ಒತ್ತಡವನ್ನು ತಾಳಲು ತಮ್ಮಿಂದ ಆಗುತ್ತಿಲ್ಲ ಎಂದು ಅವರು ಸಂಪಾದಕರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ. ಕಾದಂಬರಿಯ ಮೂರು ಅಧ್ಯಾಯಗಳು ಈಗಾಗಲೇ ಪ್ರಕಟವಾಗಿವೆ.
ಮಹಿಳೆಯರು ದೇವಸ್ಥಾನಕ್ಕೆ ಹೋಗುವುದನ್ನು ಕಾದಂಬರಿಯು ಕೆಟ್ಟದಾಗಿ ಚಿತ್ರಿಸಿದೆ ಎಂಬುದು ವಿರೋಧಿಗಳ ಆರೋಪ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ‘ಹಿಂದುತ್ವ ತಾಲಿಬಾನ್ ಸಂಸ್ಕೃತಿ ಬಲಗೊಳ್ಳುತ್ತಿದೆ ಎಂದು ನಾನು ಹೇಳಿದ್ದನ್ನು ನಂಬದವರು, ಮಲಯಾಳಂ ಲೇಖಕನಿಗೆ ಎದುರಾಗಿರುವ ಬೆದರಿಕೆಯಿಂದ ಅದನ್ನು ಅರಿಯಬಹುದು’ ಎಂದಿದ್ದಾರೆ.
ಹಿಂದೂ ಐಕ್ಯ ವೇದಿ ಕಾರ್ಯಕರ್ತರು ಎಂದು ಶಂಕಿಸಲಾದ ತಂಡವು, ಇತ್ತೀಚೆಗೆ ಕೊಚ್ಚಿಯ ತೃಪ್ಪುಣಿತ್ತುರದಲ್ಲಿ ನಡೆದ ಪುಸ್ತಕ ಮೇಳಕ್ಕೆ ಅಡ್ಡಿಪಡಿಸುವ ಮೂಲಕಈ ಕಾದಂಬರಿ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿತ್ತು.
ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಹರೀಶ್ ಅವರು, ‘ಆದಾಂ’, ‘ರಸವಿದ್ಯೆಯುಡೆ ಚರಿತ್ರಂ’ ಎಂಬ ಹೆಸರಾಂತ ಕೃತಿಗಳನ್ನು ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.