ADVERTISEMENT

ಐಎಸ್‌ ಸೇರಿದ್ದ ಕೇರಳದ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:26 IST
Last Updated 1 ಆಗಸ್ಟ್ 2019, 19:26 IST

ತಿರುವನಂತಪುರ: ಐಎಸ್ ಉಗ್ರ ಸಂಘಟನೆಗೆ ಸೇರಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ ಯುವಕನೊಬ್ಬ ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ವಾಟ್ಸ್‌ಆ್ಯಪ್‌ ಸಂದೇಶ ಲಭಿಸಿದೆ.

ಎಡಪ್ಪಾಲ್‌ ನಿವಾಸಿ ಮುಹಮ್ಮದ್‌ ಮುಹಸಿನ್‌ (23) ಮೃತ ಯುವಕ. ಈತನ ಜೊತೆ ಸುಮಾರು ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದೂ ಸಂದೇಶದಲ್ಲಿ ಹೇಳಲಾಗಿದೆ.

ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುಹಸಿನ್‌ನ ಸಹೋದರಿಗೆ ಅಪರಿಚಿತ ಸಂಖ್ಯೆಯಿಂದ ಮಲಯಾಳ ಭಾಷೆಯಲ್ಲಿ ವಾಟ್ಸ್‌ಆ್ಯಪ್‌ ಸಂದೇಶ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ADVERTISEMENT

ತ್ರಿಶ್ಯೂರ್‌ ಜಿಲ್ಲೆಯಲ್ಲಿ ಎಂಜಿನಿ ಯರಿಂಗ್‌ ವ್ಯಾಸಂಗ ಮಾಡುತ್ತಿದ್ದ ಮುಹಸಿನ್‌ 2017 ಅಕ್ಟೋಬರ್‌ನಿಂದ ನಾಪತ್ತೆಯಾಗಿದ್ದ.

ಕಾಲೇಜಿನಿಂದ ಪ್ರವಾಸಕ್ಕೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಈತ, ಐಎಸ್‌ಗೆ ಸೇರಿದ್ದಾನೆ ಎಂದು ಅನಂತರ ಮನೆಯವರಿಗೆ ಮಾಹಿತಿ ತಲುಪಿತ್ತು.

ಕೇರಳದ ಸುಮಾರು 60 ಮಂದಿ ಈಗಲೂ ಐಎಸ್‌ ಸಂಘಟನೆಯಲ್ಲಿದ್ದಾರೆ ಎಂದು ಈಚೆಗೆ ಲಭಿಸಿದ ಸಂದೇಶದಿಂದ ತಿಳಿದುಬಂದಿರುವುದಾಗಿ ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಕೇರಳದ 98 ಮಂದಿ ಐಎಸ್‌ಗೆ ಸೇರಿದ್ದಾರೆ. ಇವರಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ಮುಹಸಿನ್‌ನ ಕುಟುಂಬಕ್ಕೆ ಲಭಿಸಿರುವ ಸಂದೇಶದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.