ಬೆಂಗಳೂರು: ಸ್ಕೇಟಿಂಗ್ ಕುರಿತು ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಕೇರಳದ ಯುವಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಕೇರಳದ ಅನಾಸ್ ಹಜಾಸ್(31) ಮೇ 29ರಂದು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಪ್ರವಾಸ ಹೊರಟಿದ್ದರು. ಸ್ಕೇಟಿಂಗ್ ಮೂಲಕವೇ 3,700 ಕಿ.ಮೀ. ದೂರ ಕ್ರಮಿಸುವುದು ಅವರ ಗುರಿಯಾಗಿತ್ತು.
ಹರಿಯಾಣ ತಲುಪಿದ್ದ ಅನಾಸ್, ಅಲ್ಲಿನ ಕಾಲ್ಕಾದಲ್ಲಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸ್ಕೇಟಿಂಗ್ ಮೂಲಕ ತೆರಳುತ್ತಿದ್ದ ಅವರಿಗೆ ಟ್ರಕ್ ಬಡಿದಿತ್ತು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಕಾಶ್ಮೀರ ತಲುಪಲು 15 ದಿನ ಇರುವಾಗಲೇ ಅನಾಸ್ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾಗಿದ್ದ ಅವರು, ಪ್ರವಾಸದಲ್ಲಿ ಆಸಕ್ತಿ ಹೊಂದಿದ್ದರು. ಅಲ್ಲದೆ, ಸ್ಕೇಟಿಂಗ್ ಯಾತ್ರೆಯ ಅಪ್‌ಡೇಟ್‌ಗಳನ್ನು ದಿನವೂ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.