ತಿರುವನಂತಪುರ:ಇಡುಕ್ಕಿ ಜಿಲ್ಲೆಯಲ್ಲಿರುವ ದಟ್ಟಾರಣ್ಯದಲ್ಲಿ 15 ಕಿ.ಮೀ. ಒಳಗಿರುವ ಎಡಮಲಕ್ಕುಡಿ ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳೂ ಇದೀಗ ಆನ್ಲೈನ್ ತರಗತಿಗಳಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಒಂದನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುವ ಕೇರಳದ ಮಹತ್ವಾಕಾಂಕ್ಷಿ ಯೋಜನೆ ‘ಫಸ್ಟ್ಬೆಲ್’ ಪ್ರಾಯೋಗಿಕ ಹಂತವನ್ನು ಪೂರ್ಣಗೊಳಿಸಿದೆ. ‘ಫಸ್ಟ್ಬೆಲ್’ನಲ್ಲಿ ಶೈಕ್ಷಣಿಕ ವರ್ಷದ ಮೊದಲ ತರಗತಿ ಸೋಮವಾರದಿಂದ ಆರಂಭವಾಗಲಿದೆ. ರಾಜ್ಯದಾದ್ಯಂತ 41 ಲಕ್ಷ ವಿದ್ಯಾರ್ಥಿಗಳು ತಮ್ಮ ಮನೆಯಲ್ಲೇ ಅಥವಾ ಸಮುದಾಯ ಶೈಕ್ಷಣಿಕ ಕೇಂದ್ರಗಳಲ್ಲಿ ಕುಳಿತು ಆನ್ಲೈನ್ ತರಗತಿಗಳಲ್ಲಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ ಪರಿಣಾಮ: ‘ಫಸ್ಟ್ಬೆಲ್’ಆನ್ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ಫೋನ್, ಟಿವಿ ಲಭ್ಯವಿಲ್ಲ ಎಂಬ ಕಾರಣಕ್ಕೆ ಮಲಪ್ಪುರಂ ಜಿಲ್ಲೆಯ ದಲಿತ ಕುಟುಂಬದ 9 ನೇ ತರಗತಿಯ ವಿದ್ಯಾರ್ಥಿನಿ ದೇವಿಕಾ ಜೂನ್ 1ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದಲ್ಲಿ 2.26 ಲಕ್ಷ ವಿದ್ಯಾರ್ಥಿಗಳ ಬಳಿ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಬೇಕಾದ ಅಗತ್ಯ ಮೂಲಸೌಕರ್ಯಗಳಿಲ್ಲ ಎನ್ನುವುದು ಈ ಘಟನೆಯಿಂದ ಬಹಿರಂಗವಾಗಿತ್ತು.
ಒಂದು ಲಕ್ಷ ಟಿವಿ, ಸ್ಮಾರ್ಟ್ಫೋನ್ ದೇಣಿಗೆ:ವಿದ್ಯಾರ್ಥಿನಿ ಆತ್ಮಹತ್ಯೆ ಬೆನ್ನಲ್ಲೇ ಸೌಲಭ್ಯವಂಚಿತ ವಿದ್ಯಾರ್ಥಿಗಳಿಗೆ ಆನ್ಲೈನ್ ಸಂಪರ್ಕ ಹಾಗೂ ಅವುಗಳಿಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸುವ ಹಲವು ಅಭಿಯಾನಗಳು ನಡೆದವು. ‘ಖಾಸಗಿ ಸಂಸ್ಥೆಗಳು, ಎನ್ಜಿಒಗಳು, ಜನರು ಒಂದು ಲಕ್ಷಕ್ಕೂ ಅಧಿಕ ಟಿವಿ, ಸ್ಮಾರ್ಟ್ಫೋನ್ಗಳನ್ನುದೇಣಿಗೆಯಾಗಿ ನೀಡಿದ್ದಾರೆ. ಇವುಗಳನ್ನು ಎಡಮಲಕ್ಕುಡಿಯಂಥ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಆನ್ಲೈನ್ ತರಗತಿ ವ್ಯವಸ್ಥೆಗೆ ಬಳಸಿಕೊಳ್ಳಲಾಗುತ್ತಿದೆ. ದಟ್ಟ ಕಾಡಿನೊಳಗೂ ಆನ್ಲೈನ್ ತರಗತಿಗಳು ವಿದ್ಯಾರ್ಥಿಗಳಿಗೆ ತಲುಪುವಂತೆ ನಮ್ಮ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ’ ಎಂದು ಕೇರಳ ಶಿಕ್ಷಣ ಮೂಲಸೌಕರ್ಯ ಮತ್ತು ತಂತ್ರಜ್ಞಾನ(ಕೈಟ್) ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಅನ್ವರ್ ಸದಾತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕನ್ನಡ ಹಾಗೂ ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೂ ಆನ್ಲೈನ್ ತರಗತಿಗಳನ್ನು ಕೈಟ್ ರೂಪಿಸಿದೆ. ಫೇಸ್ಬುಕ್ ಅಥವಾ ಯೂಟ್ಯೂಬ್ ಮುಖಾಂತರವೂ ಈ ತರಗತಿಗಳನ್ನು ವೀಕ್ಷಿಸುವ ಅವಕಾಶ ನೀಡಲಾಗಿದೆ.
ಸಮುದಾಯ ಶೈಕ್ಷಣಿಕ ಕೇಂದ್ರ ರಚನೆ:ಸ್ಥಳೀಯ ಆಡಳಿತದ ಸಹಾಯದೊಂದಿಗೆ ಕರಾವಳಿ ಪ್ರದೇಶ, ಬುಡಕಟ್ಟು ಪ್ರದೇಶ, ಕೊಳೆಗೇರಿಗಳಲ್ಲಿ ಸಮುದಾಯ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿದ್ದ 1.20 ಲಕ್ಷ ಲ್ಯಾಪ್ಟಾಪ್, 70 ಸಾವಿರಕ್ಕೂ ಅಧಿಕ ಪ್ರೊಜೆಕ್ಟರ್ಗಳನ್ನು ಈ ಕೇಂದ್ರಗಳಲ್ಲಿ ಆನ್ಲೈನ್ ಶಿಕ್ಷಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಕೇಬಲ್ ಟಿವಿ ಸಂಸ್ಥೆಗಳು ಹಾಗೂ ಮೊಬೈಲ್ ಕಂಪನಿಗಳೂ ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಸಹಾಯ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.