ADVERTISEMENT

ಕೇಂದ್ರದ ತಾರತಮ್ಯ ನೀತಿ ವಿರೋಧಿಸಿ ಎಡಪಕ್ಷಗಳ ಪ್ರತಿಭಟನೆ; ದೆಹಲಿಯಲ್ಲಿ ಹೋರಾಟ

ಪಿಟಿಐ
Published 9 ಫೆಬ್ರುವರಿ 2024, 0:30 IST
Last Updated 9 ಫೆಬ್ರುವರಿ 2024, 0:30 IST
<div class="paragraphs"><p>ದೆಹಲಿಯ ಜಂತರ್‌ ಮಂತರ್‌ ಬಳಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಮ್‌ ಯೆಚೂರಿ, ಕೇರಳ ಸಿ.ಎಂ ಪಿಣರಾಯಿ ವಿಜಯನ್‌, ಪಂಜಾಬ್‌ ಸಿ.ಎಂ ಭಗವಂತ್ ಮಾನ್‌, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಸೇರಿದಂತೆ ಎಲ್‌ಡಿಎಫ್‌ ನಾಯಕರು ಪ್ರತಿಭಟನೆ ನಡೆಸಿದರು</p></div>

ದೆಹಲಿಯ ಜಂತರ್‌ ಮಂತರ್‌ ಬಳಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಮ್‌ ಯೆಚೂರಿ, ಕೇರಳ ಸಿ.ಎಂ ಪಿಣರಾಯಿ ವಿಜಯನ್‌, ಪಂಜಾಬ್‌ ಸಿ.ಎಂ ಭಗವಂತ್ ಮಾನ್‌, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಸೇರಿದಂತೆ ಎಲ್‌ಡಿಎಫ್‌ ನಾಯಕರು ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆ ಪಾಲನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ಎಲ್‌ಡಿಎಫ್‌ ಹಾಗೂ ಇತರ ಕೆಲ ಪಕ್ಷಗಳ ನಾಯಕರು ಗುರುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.

ADVERTISEMENT

ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರನ್ನು ಬಳಸಿಕೊಂಡು, ಪ್ರತಿಯೊಂದು ಕಾರ್ಯಗಳಿಗೆ ಅಡ್ಡಿಪಡಿಸುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್‌, ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ, ಡಿಎಂಕೆ ಮುಖಂಡರಾದ ತಿರುಚ್ಚಿ ಶಿವ, ಪಳನಿವೇಲ್‌ ತ್ಯಾಗರಾಜನ್‌, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಮ್‌ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಎಲ್‌ಡಿಎಫ್‌ ಸಂಸದರು, ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಪಿಣರಾಯಿ ವಿಜಯನ್‌, ‘ಪ್ರತಿಭಟನೆಯು ಉತ್ತರ ಮತ್ತು ದಕ್ಷಿಣ ಪ್ರತ್ಯೇಕತೆಯನ್ನು ಉತ್ತೇಜಿಸುವುದಿಲ್ಲ. ಒಕ್ಕೂಟ ವ್ಯವಸ್ಥೆಯ ವಿರುದ್ಧವೂ ಅಲ್ಲ. ಬದಲಿಗೆ ಇದು ರಾಜ್ಯದ ಜನರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ನಡೆಸುತ್ತಿರುವ ಪ್ರತಿಭಟನೆಯಾಗಿದೆ. ಇದು ಕೇಂದ್ರದ ತಾರತಮ್ಯ ನೀತಿಯನ್ನು ವಿರೋಧಿಸುವ ಪ್ರಜಾಸತ್ತಾತ್ಮಕ ಮಾದರಿಯ ಪ್ರತಿಭಟನೆ ಆಗಿದೆ’ ಎಂದರು.

‘ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸಂರಕ್ಷಿಸಲು ನಾವೆಲ್ಲರೂ ಇಲ್ಲಿ ಒಗ್ಗೂಡಿದ್ದೇವೆ. ರಾಜ್ಯಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದುದನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಹೊಸ ಹೋರಾಟವನ್ನು ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.

ಕೇಂದ್ರದಿಂದ ಅತಿಕ್ರಮಣ

‘ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ಅತಿಕ್ರಮಿಸಿದೆ’ ಎಂದು ಅವರು ದೂರಿದರು.

‘ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರದ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಅವರು ರಾಜ್ಯ ಸರ್ಕಾರದ ಕೆಲಸಗಳಿಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ವಿಜಯನ್‌ ಆರೋಪಿಸಿದರು.

‘ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದೇ ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಸಾಂವಿಧಾನಿಕವಾಗಿ ರಾಜ್ಯಪಾಲರು ಆಯಾ ರಾಜ್ಯಗಳ ಸಚಿವ ಸಂಪುಟಗಳ ಸಲಹೆಯಂತೆ ಕರ್ತವ್ಯಗಳನ್ನು ನಿರ್ವಹಿಸಬೇಕು. ಆದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅವರು ದೂರಿದರು.

‘ಪಂಜಾಬ್‌, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು ಹೀಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಹೇಗೆ ಅಧಿಕಾರ ನಡೆಸುತ್ತಿದ್ದಾರೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ರಾಜ್ಯಪಾಲರು ಶಾಸಕಾಂಗದ ಸ್ವಾಯತ್ತತೆಯಲ್ಲಿ ಮಧ್ಯ ಪ್ರವೇಶಿಸಿರುವುದನ್ನೂ ಗಮನಿಸಿದ್ದೇವೆ’ ಎಂದ ಅವರು, ‘ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಉಳಿಸುವುದು ನಮ್ಮ ಪ್ರತಿಭಟನೆಯ ಉದ್ದೇಶವಾಗಿದೆ’ ಎಂದರು.

ಕಪ್ಪು ಬಟ್ಟೆ ಧರಿಸಿ ಕಲಾಪದಲ್ಲಿ ಭಾಗಿ
ಮಧ್ಯಂತರ ಬಜೆಟ್‌ನಲ್ಲಿ ತಮಿಳುನಾಡಿನ ಅಗತ್ಯ ಅನುದಾನ ಮಂಜೂರು ಮಾಡಿಲ್ಲ ಎಂದು ಆರೋಪಿಸಿ ಡಿಎಂಕೆ ಸದಸ್ಯರು ಗುರುವಾರ ಕಪ್ಪು ಬಟ್ಟೆ ಧರಿಸಿ ಲೋಕಸಭಾ ಕಲಾಪದಲ್ಲಿ ಪಾಲ್ಗೊಂಡರು. ಕೆಲ ದಿನಗಳಿಂದ ಈ ವಿಷಯವನ್ನು ಡಿಎಂಕೆ ನಾಯಕರು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಯುದ್ಧ ಸಾರಿದೆ: ಕೇಜ್ರಿವಾಲ್‌

ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ನಡೆಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅವರು, ‘ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳು ದೇಶದ 70 ಕೋಟಿ ಜನರನ್ನು ಪ್ರತಿನಿಧಿಸುತ್ತಿವೆ. ಆದರೆ ಬಿಜೆಪಿಯು ಈ ರಾಜ್ಯಗಳ ವಿರುದ್ಧ ಸಮರ ಸಾರಿದೆ. ನಮ್ಮೊಂದಿಗೆ ಭಾರತ– ಪಾಕಿಸ್ತಾನದ ಪರಿಸ್ಥಿತಿಯನ್ನು ಸೃಷ್ಟಿಸಿದೆ’ ಎಂದು ದೂರಿದರು.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನ ನೀಡುತ್ತಿಲ್ಲ. ಬದಲಿಗೆ ರಾಜ್ಯಪಾಲರು, ಲೆಫ್ಟಿನೆಂಟ್‌ ಗವರ್ನರ್‌ಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆ. ಅಲ್ಲದೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

‘ದೆಹಲಿಯ ಜನರು ₹ 2 ಲಕ್ಷ ಕೋಟಿಯನ್ನು ಆದಾಯ ತೆರಿಗೆಯಾಗಿ ಪಾವತಿಸುತ್ತಾರೆ. ಆದಕ್ಕೆ ಬದಲಿಯಾಗಿ ಕೇಂದ್ರ ಸರ್ಕಾರ ದೆಹಲಿಗೆ ಕೇವಲ ₹325 ಕೋಟಿ ನೀಡಿದೆ. ಬ್ರಿಟಿಷರು ಸಹ 100 ವರ್ಷಗಳಲ್ಲಿ ಇಷ್ಟು ಲೂಟಿ ಮಾಡಿರಲಿಲ್ಲ’ ಎಂದು ಅವರು ದೂರಿದರು.

ಸಂಕಷ್ಟಕ್ಕೆ ಕೇರಳ ಸರ್ಕಾರದ ಪಾಲೂ ಇದೆ

ತಿರುವನಂತಪುರ: ಕೇರಳದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರವನ್ನಷ್ಟೇ ದೂರುವುದು ಸರಿಯಲ್ಲ. ಕೇರಳ ಸರ್ಕಾರದ ದುರಾಡಳಿತ, ದುಂದುವೆಚ್ಚ ಮತ್ತು ಭ್ರಷ್ಟಾಚಾರವು ರಾಜ್ಯವನ್ನು ಆರ್ಥಿಕ ತೊಂದರೆಗೆ ಸಿಲುಕುವಂತೆ ಮಾಡಿದೆ. ಹೀಗಾಗಿಯೇ ದೆಹಲಿಯಲ್ಲಿ ಎಲ್‌ಡಿಎಫ್‌ ನಡೆಸಿದ ಪ್ರತಿಭಟನೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.