ತಿರುವನಂತಪುರ: ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ.
ಈ ಬಾರಿ ಹಬ್ಬದ ವೇಳೆಯಲ್ಲಿ ಮದ್ಯ ಮಾರಾಟವು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ.
12 ದಿನಗಳ ಹಬ್ಬದ ಅವಧಿಯಲ್ಲಿ (ಸೆ 6ರಿಂದ 17ರವರೆಗೆ) ಒಟ್ಟು ₹ 818.21 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಈ ಹಬ್ಬದ ಅವಧಿಯಲ್ಲಿ
₹ 809.25 ಕೋಟಿಯಷ್ಟು ಮದ್ಯ ಮಾರಾಟವಾಗಿತ್ತು. ಅಂದರೆ ಶೇ 1.11ರಷ್ಟು ಏರಿಕೆ ದಾಖಲಾಗಿದೆ ಎಂದು ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ತಿರುವೋಣಂನ ಹಿಂದಿನ ದಿನವಾದ ಉತ್ರಾಡಂನಲ್ಲಿ ಕೇರಳ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿ) ಔಟ್‌ಲೆಟ್‌ಗಳಲ್ಲಿ ಭಾರಿ ಸಂಖ್ಯೆಯ ಜನಜಂಗುಳಿ ಇತ್ತು. ಅಂದು ಗರಿಷ್ಠ ಮಾರಾಟ ನಡೆದಿದೆ.
ಉತ್ರಾಡಂ ದಿನದಂದು ರಾಜ್ಯದಾದ್ಯಂತ ₹ 704.06 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಆದರೆ ಇದು ಕಳೆದ ಬಾರಿಗಿಂತ ಕಡಿಮೆ. ಕಳೆದ ವರ್ಷ ಈ ದಿನ ₹715.97 ಕೋಟಿ ಮೌಲ್ಯದಷ್ಟು ಮದ್ಯ ಮಾರಾಟವಾಗಿತ್ತು.
ಕೊಲ್ಲಂ ಜಿಲ್ಲೆಯ ಆಶ್ರಮಂನ ಔಟ್‌ಲೆಟ್‌ನಲ್ಲಿ ಉತ್ರಾಡಂ ದಿನದಂದು ಅತಿ ಹೆಚ್ಚು ಅಂದರೆ ₹ 1.15 ಕೋಟಿಯಷ್ಟು ಮಾರಾಟವಾಗಿದೆ.
ಒಟ್ಟಾರೆ ಓಣಂ ಅವಧಿಯಲ್ಲಿ ಮಲಪ್ಪುರ ತಿರೂರ್ ಔಟ್‌ಲೆಟ್‌ನಲ್ಲಿ ₹ 5.59 ಕೋಟಿಯಷ್ಟು ಮದ್ಯ ಮಾರಾಟವಾಗಿದ್ದರೆ, ಇತರ ಎರಡು ಔಟ್‌ಲೆಟ್‌ಗಳಲ್ಲಿ ತಲಾ ₹ 5 ಕೋಟಿ ಹಾಗೂ ಎಂಟು ಔಟ್‌ಲೆಟ್‌ಗಳಲ್ಲಿ ಸುಮಾರು ತಲಾ ₹ 4 ಕೋಟಿಯಷ್ಟು ಮದ್ಯ ಮಾರಾಟವಾಗಿದೆ ಎಂದು ಕೆಎಸ್‌ಬಿಸಿ ಅಂಕಿ ಅಂಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.