ADVERTISEMENT

ಯೋಗಿ ಗುರಿಯಾಗಿಸಿ ಉಪ ಮುಖ್ಯಮಂತ್ರಿ ಮೌರ್ಯ ಮಾತಿನ ಏಟು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:45 IST
Last Updated 15 ಜುಲೈ 2024, 14:45 IST
ಕೇಶವ ಪ್ರಸಾದ್ ಮೌರ್ಯ –ಪಿಟಿಐ ಚಿತ್ರ
ಕೇಶವ ಪ್ರಸಾದ್ ಮೌರ್ಯ –ಪಿಟಿಐ ಚಿತ್ರ   

ಲಖನೌ: ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡ ನಂತರ ಉತ್ತರ ಪ್ರದೇಶದ ಬಿಜೆಪಿ ಘಟಕವು ಭಾನುವಾರ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಯತ್ನ ನಡೆಸಿದರೂ, ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಪರೋಕ್ಷವಾಗಿ ನಡೆಸಿದ ವಾಗ್ದಾಳಿಯು ‍ಪಕ್ಷದ ವಲಯದಲ್ಲಿ ಒಂದಿಷ್ಟು ಮಾತುಗಳಿಗೆ ಆಹಾರವಾಗಿದೆ.

ಸಂಘಟನೆಯು ಸರ್ಕಾರಕ್ಕಿಂತಲೂ ಮಿಗಿಲು ಎಂಬುದನ್ನು ಎಲ್ಲರೂ ತಿಳಿದಿರಬೇಕು ಎಂದು ಸಭೆಯಲ್ಲಿ ಮಾತನಾಡಿದ ಮೌರ್ಯ ಹೇಳಿದರು. ‘ಸಂಘಟನೆಯು ಸರ್ಕಾರಕ್ಕಿಂತಲೂ ದೊಡ್ಡದು. ದೊಡ್ಡದಾಗಿದೆ ಮತ್ತು ದೊಡ್ಡದಾಗಿಯೇ ಇರುತ್ತದೆ’ ಎಂದು ಮೌರ್ಯ ಅವರು ಹೇಳಿದಾಗ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರು ಹರ್ಷೋದ್ಗಾರ ಮಾಡಿದರು.

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಸರ್ಕಾರದ ಬಗ್ಗೆ ಸಂತಸ ಇಲ್ಲ ಎಂಬ ಸಂದೇಶವನ್ನು ಕೂಡ ಅವರು ರವಾನಿಸಿದರು. ‘ನಿಮ್ಮ (ಕಾರ್ಯಕರ್ತರ) ಮತ್ತು ನನ್ನ ನೋವು ಒಂದೇ ಆಗಿದೆ’ ಎಂದರು. ಆದಿತ್ಯನಾಥ ನೇತೃತ್ವದ ಸರ್ಕಾರದಲ್ಲಿ ಕಾರ್ಯಕರ್ತರಿಗೆ ಸೂಕ್ತ ಗೌರವ ಸಿಗುತ್ತಿಲ್ಲ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಬಿಜೆಪಿ ಕಳಪೆ ಸಾಧನೆ ತೋರಿರುವುದಕ್ಕೆ ಇದೂ ಒಂದು ಕಾರಣ ಎಂಬುದನ್ನು ಮೌರ್ಯ ಸೂಚ್ಯವಾಗಿ ಹೇಳಿದರು.

ADVERTISEMENT

ಮೌರ್ಯ ಅವರು ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿಕೊಂಡು ಈ ಮಾತುಗಳನ್ನು ಆಡಿದ್ದಾರೆ ಎಂದು ಭಾವಿಸಲಾಗಿದೆ. ಏಕೆಂದರೆ ಆದಿತ್ಯನಾಥ ಅವರು ತಮ್ಮ ಭಾಷಣದಲ್ಲಿ, ಸರ್ಕಾರವು ಸಂಘಟನೆಗಿಂತಲೂ ದೊಡ್ಡದು ಎಂಬ ಸಂದೇಶ ರವಾನಿಸಲು ಯತ್ನಿಸಿದ್ದರು.

ಸರ್ಕಾರಕ್ಕೆ ತೊಂದರೆ ಆದರೆ ಪಂಚಾಯತ್‌ಗಳ ನೇತೃತ್ವ ವಹಿಸಿರುವ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿರುವ ಪಕ್ಷದ ಮುಖಂಡರಿಗೆ ಕೂಡ ತೊಂದರೆ ಆಗುತ್ತದೆ ಎಂದು ಆದಿತ್ಯನಾಥ ಅವರು ಹೇಳಿದ್ದರು. ಅತಿಯಾದ ಆತ್ಮವಿಶ್ವಾಸದ ಕಾರಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವು ಹಿನ್ನಡೆ ಕಾಣುವಂತಾಯಿತು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಆದಿತ್ಯನಾಥ ಅವರ ಕಾರ್ಯಶೈಲಿಯ ಬಗ್ಗೆ ಮೌರ್ಯ ಅವರು ತಮ್ಮ ಅತೃಪ್ತಿಯನ್ನು ಈ ಹಿಂದೆಯೂ ವ್ಯಕ್ತಪಡಿಸಿದ್ದಾರೆ, ಅದನ್ನು ಪಕ್ಷದ ಕೇಂದ್ರ ನಾಯಕರಿಗೆ ತಿಳಿಸಿದ್ದಾರೆ. ಮುಖ್ಯಮಂತ್ರಿಯವರು ಕರೆದ ಸಭೆಯಿಂದ ದೂರ ಉಳಿಯುವ ಕೆಲಸವನ್ನೂ ಮೌರ್ಯ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಿತಿ ಕೆಟ್ಟದ್ದಾಗಿದೆ, ಪಕ್ಷವು 2027ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇಲ್ಲ ಎಂದು ಪಕ್ಷದ ಶಾಸಕ ರಮೇಶ್‌ ಚಂದ್ರ ಮಿಶ್ರಾ ಅವರು ಎರಡು ದಿನಗಳ ಹಿಂದೆಯಷ್ಟೇ ಹೇಳಿದ್ದರು.

ರಾಜ್ಯದಲ್ಲಿ ಪರಿಸ್ಥಿತಿ ಸರಿಯಾಗಬೇಕು ಎಂದಾದರೆ ಪಕ್ಷದ ಕೇಂದ್ರ ನಾಯಕರು ಮಧ್ಯ ಪ್ರವೇಶಿಸಬೇಕು ಎಂದು ಮಿಶ್ರಾ ಒತ್ತಾಯಿಸಿದ್ದಾರೆ. ಪಕ್ಷದ ಹಿರಿಯ ಮುಖಂಡ ಮೋತಿ ಸಿಂಗ್ ಅವರು, ಈಗಿನ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರವು ಹಲವು ಪಟ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮೌರ್ಯ ಹಾಗೂ ಪಕ್ಷದ ಇತರ ಕೆಲವು ನಾಯಕರು ಸರ್ಕಾರದ ಬಗ್ಗೆ ಆಡುತ್ತಿರುವ ಮಾತುಗಳು, ‘ಸರ್ಕಾರದಲ್ಲಿ ಆದಿತ್ಯನಾಥ ಅವರ ತೀರ್ಮಾನವೇ ಅಂತಿಮ ಎಂಬುದಾದರೆ, 2027ರಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ’ ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸುವ ಯತ್ನ ಎಂದು ವ್ಯಾಖ್ಯಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.