ಬೆಂಗಳೂರು: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.
77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಇಂದು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವ ಮೂಲಕ ಅವರ ಉದ್ದೇಶಗಳನ್ನು ಈಡೇರಿಸುವೆಡೆಗಿನ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಜೈ ಹಿಂದ್ ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಈಗ ಜನಸಂಖ್ಯೆ ದೃಷ್ಟಿಯಲ್ಲೂ ಮುಂಚೂಣಿಯಲ್ಲಿದೆ. ಇಂದು 140 ಕೋಟಿ ಭಾರತೀಯರು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭಧಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಧೀರ ಯೋಧರಿಗೆ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದರು. 1000 ವರ್ಷಗಳ ಗುಲಾಮಗಿರಿಯಲ್ಲಿ ನಾವು ಒಬ್ಬರ ನಂತರ ಒಬ್ಬರಿಂದ ಲೂಟಿಗೆ ಒಳಗಾಗಿದ್ದೇವೆ. ಆದರೆ ಈ ಅವಧಿಯಲ್ಲಿ ಭಾರತದ ಧೀರ ಯೋಧರು ಸ್ವಾತಂತ್ರ್ಯದ ಜ್ವಾಲೆ ಉರಿಯುವಂತೆ ಮಾಡಿದರು ಎಂದು ಹೇಳಿದರು.
ಮಣಿಪುರದ ಜನರೊಂದಿಗೆ ಇಡೀ ದೇಶವೇ ನಿಂತಿದೆ. ಶಾಂತಿ ಮೂಲಕ ಮಾತ್ರ ಪರಿಹಾರ ಸಾಧ್ಯ. ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಈ ವರ್ಷ ನೈಸರ್ಗಿಕ ವಿಕೋಪದಿಂದ ಊಹಿಸಲಾಗದಷ್ಟು ನಷ್ಟ ಉಂಟಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ಆರೋಗ್ಯ ವಲಯದಲ್ಲಿ ಭಾರತದ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ, ಇಂದು ಆಯುಷ್ ಮತ್ತು ಯೋಗದತ್ತ ಇಡೀ ವಿಶ್ವದ ದೃಷ್ಟಿ ನೆಟ್ಟಿದೆ ಎಂದು ಹೇಳಿದ್ದಾರೆ.
'ದೇಶ ಮೊದಲು' - ಪ್ರಧಾನಿ ಪ್ರತಿಪಾದನೆ
ದೇಶದ ಜನತೆಯ ಕಲ್ಯಾಣಕ್ಕಾಗಿ ಸರ್ಕಾರದ ಪ್ರತಿಯೊಂದು ಕ್ಷಣ, ಪ್ರತಿ ರೂಪಾಯಿ ವಿನಿಯೋಗಿಸಲಾಗುತ್ತಿದೆ. ದೇಶ ಮೊದಲು ಮನೋಭಾವದಿಂದ ಇಡೀ ದೇಶವೇ ಒಂದಾಗಿದೆ ಎಂದು ಹೇಳಿದರು.
ಬಡತನ ನಿರ್ಮೂಲನೆ:
ಐದು ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
'ವಿಶ್ವಕರ್ಮ ಯೋಜನೆ' ಘೋಷಣೆ...
ದೇಶದ ಕಾರ್ಮಿಕರಿಗೆ ನೆರವಾಗಲು 13,000ರಿಂದ 15,000 ಕೋಟಿ ರೂಪಾಯಿ ವೆಚ್ಚದಲ್ಲಿ 'ವಿಶ್ವಕರ್ಮ ಯೋಜನೆ'ಗೆ ಚಾಲನೆ ನೀಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪಾತ್ರ...
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕನಸು ನನಸು...
ಕನಸುಗಳನ್ನು ನನಸಾಗಿಸಲು ಭಾರತದ ಜತೆ ಜನಸಂಖ್ಯೆ, ಪ್ರಜಾಪ್ರಭುತ್ವ, ವೈವಿಧ್ಯತೆ ಇದೆ ಎಂದು ಅವರು ಹೇಳಿದರು. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ದೇಶವನ್ನು ಬದಲಾಯಿಸುತ್ತಿವೆ ಎಂದು ಪ್ರಧಾನಿ ನುಡಿದರು.
ದೀರ್ಫಾವಧಿಯ ಭಾಷಣ...
82 ನಿಮಿಷ ಭಾಷಣ ಮಾಡಿರುವ ಪ್ರಧಾನಿ ಮೋದಿ ಮಾಜಿ ಪ್ರದಾನಿ ಐ.ಕೆ.ಗುಜ್ರಾಲ್ ದಾಖಲೆಯನ್ನುಮುರಿದಿದ್ದಾರೆ. 1997ರಲ್ಲಿ ಗುಜ್ರಾಲ್ 71 ನಿಮಿಷ ಭಾಷಣ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.