ADVERTISEMENT

ಕಾಶ್ಮೀರ ಕುರಿತ ಪೋಸ್ಟ್‌: ಭಾರತೀಯರ ಕ್ಷಮೆ ಕೇಳಿದ ಕೆಎಫ್‌ಸಿ,ಪಿಜ್ಜಾ ಹಟ್‌, ಹುಂಡೈ

ಪಿಟಿಐ
Published 9 ಫೆಬ್ರುವರಿ 2022, 9:15 IST
Last Updated 9 ಫೆಬ್ರುವರಿ 2022, 9:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್‌ ಪ್ರಕಟಿಸಿದ್ದ ‘ಕ್ವಿಕ್‌ ಸರ್ವಿಸ್‌ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌)’ ಕೆಎಫ್‌ಸಿಯು ಭಾರತೀಯರ ಕ್ಷಮೆ ಯಾಚಿಸಿದೆ.

ಕೆಎಫ್‌ಸಿಯ ಪಾಕಿಸ್ತಾನದ ಫ್ರಾಂಚೈಸ್‌ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಮೂಲಕ ಸೋಮವಾರ ಕಾಶ್ಮೀರದ ಪ್ರತ್ಯೇಕತಾವಾದವನ್ನು ಬೆಂಬಲಿಸುವ ಪೋಸ್ಟ್‌ ಪ್ರಕಟಿಸಲಾಗಿತ್ತು. ಈ ಬಗ್ಗೆ ಭಾರತದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

ಮತ್ತೊಂದು ಕ್ಯುಎಸ್‌ಆರ್‌ ‘ಪಿಜ್ಜಾ ಹಟ್‌’ನ ಪಾಕಿಸ್ತಾನ ಫ್ರಾಂಚೈಸ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದಲೂ ಇದೇ ಮಾದರಿಯ ಪೋಸ್ಟ್‌ ಪ್ರಕಟಿಸಲಾಗಿತ್ತು. ಈ ಪೋಸ್ಟ್‌ ಅನ್ನು ಕಂಪನಿ ಬೆಂಬಲಿಸುವುದಿಲ್ಲ ಎಂದು ‘ಪಿಜ್ಜಾ ಹಟ್‌’ ತಿಳಿಸಿದೆ.

ADVERTISEMENT

ಕೆಎಫ್‌ಸಿ ಮತ್ತು ಪಿಜ್ಜಾ ಹಟ್‌ ಎರಡೂ ಅಮೆರಿಕ ಮೂಲದ ‘ಯಮ್‌’ (Yum)ನ ಅಂಗಸಂಸ್ಥೆಗಳಾಗಿವೆ.

‘ದೇಶದ ಹೊರಗಿನ ಕೆಎಫ್‌ಸಿಯ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪೋಸ್ಟ್‌ಗಳಿಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಭಾರತವನ್ನು ಗೌರವಿಸುತ್ತೇವೆ. ಎಲ್ಲಾ ಭಾರತೀಯರಿಗೆ ಹೆಮ್ಮೆಯಿಂದ ಸೇವೆ ನೀಡಬೇಕೆಂಬ ನಮ್ಮ ಬದ್ಧತೆ ದೃಢವಾಗಿದೆ’ ಎಂದು ‘ಕೆಎಫ್‌ಸಿ ಇಂಡಿಯಾ’ದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಂದೇಶ ಹಂಚಿಕೊಳ್ಳಲಾಗಿದೆ.

‘ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿರುವ ಪೋಸ್ಟ್‌ನ ವಿಷಯದಲ್ಲಿ ಯಾರಿಗೂ ಕ್ಷಮೆ ನೀಡುವುದಿಲ್ಲ, ಬೆಂಬಲಿಸುವುದಿಲ್ಲ ಅಥವಾ ಒಪ್ಪುವುದಿಲ್ಲ’ ಎಂದು ಪಿಜ್ಜಾ ಹಟ್‌ ಸ್ಪಷ್ಟನೆ ನೀಡಿದೆ.

ಏನಿದು ವಿವಾದ?

‘ಕಾಶ್ಮೀರ ಕಾಶ್ಮೀರಿಗಳದ್ದು. ನಾವು ನಿಮ್ಮ ಪರ ಅಚಲವಾಗಿ ನಿಲ್ಲುತ್ತೇವೆ’ ಎಂಬ ಪೋಸ್ಟ್‌ಗಳನ್ನು ಪಾಕಿಸ್ತಾನದ ಕೆಎಫ್‌ಸಿ ಫ್ರಾಂಚೈಸ್‌ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಪ್ರಕಟಿಸಿತ್ತು.

ಅದೇ ರೀತಿ, 'ಪಿಜ್ಜಾ ಹಟ್‌’ನ ಪಾಕಿಸ್ತಾನದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ’ ಎಂದು ಪೋಸ್ಟ್‌ ಹಾಕಲಾಗಿತ್ತು.

ಇದಕ್ಕೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಯಿತು. #BoycottKFC ಮತ್ತು #BoycottPizzaHut ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ ನಲ್ಲಿ ಟ್ರೆಂಡ್‌ ಆದವು. ಇದೇ ಹಿನ್ನೆಲೆಯಲ್ಲಿ ಎರಡೂ ಖಾತೆಗಳಿಂದ ವಿವಾದಿತ ಪೋಸ್ಟ್‌ಗಳನ್ನು ಡಿಲಿಟ್‌ ಮಾಡಲಾಗಿದೆ.

ಹ್ಯೂಂಡೈನಿಂದಲೂ ಯಡವಟ್ಟು

ಕೆಎಫ್‌ಸಿ, ಪಿಜ್ಜಾಹಟ್‌ನಂತೆಯೇ ಆಟೊಮೊಬೈಲ್‌ ಸಂಸ್ಥೆ ಹ್ಯೂಂಡೈ ಕೂಡ ಭಾನುವಾರ ವಿವಾದಕ್ಕೆ ಸಿಲುಕಿತ್ತು.
ಹ್ಯೂಂಡೈ ಪಾಕಿಸ್ತಾನ ವಿಭಾಗದ ಅಧಿಕೃತ ಖಾತೆ @hyundaiPakistanOfficialನಿಂದ ‘ಸ್ವಾತಂತ್ರ್ಯಕ್ಕಾಗಿ ಹೋರಾಟ’ ಎಂದು ಕಾಶ್ಮೀರವನ್ನು ಉಲ್ಲೇಖಿಸಿ ಭಾನುವಾರ ಪೋಸ್ಟ್‌ ಪ್ರಕಟಿಸಲಾಗಿತ್ತು. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ #BoycottHyundai ಹ್ಯಾಷ್‌ಟ್ಯಾಗ್‌ ಅಡಿ ಟೀಕೆಗಳು ಕೇಳಿ ಬಂದವು. ಹ್ಯೂಂಡೈನ ಕಾರುಗಳನ್ನು ಖರೀದಿಸದಂತೆ ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಯಿತು.

ಈ ಹಿನ್ನೆಲೆಯಲ್ಲಿ ಭಾನುವಾರವೇ ಪೋಸ್ಟ್‌ ಪ್ರಕಟಿಸಿದ್ದ ‘ಹುಂಡೈ ಮೋಟಾರ್ಸ್ ಇಂಡಿಯಾ’ ಭಾರತೀಯ ಮಾರುಕಟ್ಟೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.

1995ರಲ್ಲಿ ಕೆಎಫ್‌ಸಿ ಭಾರತೀಯ ಮಾರುಕಟ್ಟೆಗೆ ಪದಾರ್ಪಣೆ ಮಾಡಿತ್ತು. ಸದ್ಯ ಇದರ 450 ಕೇಂದ್ರಗಳು ಭಾರತದಲ್ಲಿವೆ.

ಪಿಜ್ಜಾ ಹಟ್‌ 1996ರಲ್ಲಿ ಭಾರತಕ್ಕೆ ಬಂದಿತ್ತು. ಇದರ 500 ಕೇಂದ್ರಗಳು ದೇಶದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.