ನವದೆಹಲಿ: ಖಾದಿ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ದ್ವಂದ್ವ ನಿಲುವಿನ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಅಭಿವೃದ್ಧಿ ಹೊಂದಿದ ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸಲು ಖಾದಿ ಸ್ಫೂರ್ತಿಯ ಮೂಲವಾಗಬಲ್ಲದು ಎಂದು ಮೋದಿ ಶನಿವಾರ ಹೇಳಿದ್ದರು. ಹಿಂದಿನ ಸರ್ಕಾರಗಳ ಜತೆ ಹೋಲಿಸಿದರೆ ತಮ್ಮ ಅಧಿಕಾರಾವಧಿಯಲ್ಲಿ ಖಾದಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಅವರು ಹೇಳಿದ್ದರು. ಇದು ಪ್ರತಿಪಕ್ಷಗಳನ್ನು ಕೆರಳಿಸಿದೆ.
ಒಂದು ಕಾಲದಲ್ಲಿ ಸ್ವಾಭಿಮಾನದ ಸಂಕೇತವಾಗಿದ್ದ ಖಾದಿ ಸ್ವಾತಂತ್ರ್ಯಾನಂತರದಲ್ಲಿ ಕಡೆಗಣಿಸಲ್ಪಟ್ಟಿತ್ತು ಎಂದು ಮೋದಿ ಹೇಳಿದ್ದರು.
‘ದೇಶಕ್ಕೆ ಖಾದಿ, ಆದರೆ ರಾಷ್ಟ್ರಧ್ವಜಕ್ಕೆ ಚೀನಾದ ಪಾಲಿಸ್ಟರ್. ಎಂದಿನಂತೆಯೇ, ಪ್ರಧಾನಿಯವರು ಹೇಳುವುದೇ ಒಂದು, ಮಾಡುವುದು ಮತ್ತೊಂದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘ಖಾದಿ ತಯಾರಿಸುವ ಸಣ್ಣ ಉದ್ದಿಮೆದಾರರನ್ನು ನಾಶಪಡಿಸುವುದಕ್ಕಾಗಿ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿದ ನಂತರ ಖಾದಿಯ ಬಗ್ಗೆ ಮಾತನಾಡುವುದು ಲಜ್ಜೆಗೆಟ್ಟತನವಾಗಿದೆ. ಈಗ ಖಾದಿಯ ಬಗ್ಗೆ ಮಾತನಾಡುವ ಮೂಲಕ ಈ ಹಿಂದುತ್ವ ಸಿದ್ಧಾಂತ ಪ್ರತಿಪಾದಕರ ದ್ವಂದ್ವ ನಿಲುವು ಬಹಿರಂಗವಾಗಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಧ್ವಜ ಸಂಹಿತೆಯೆ ತಿದ್ದುಪಡಿ ಮಾಡಿದ್ದ ಸರ್ಕಾರ, ಪಾಲಿಸ್ಟರ್‌ನಿಂದ ರಾಷ್ಟ್ರಧ್ವಜ ತಯಾರಿಸಲು ಅನುವು ಮಾಡಿಕೊಟ್ಟಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಹರ್ ಘರ್ ತಿರಂಗಾ’ ಅಭಿಯಾನದ ವೇಳೆ ಪಾಲಿಸ್ಟರ್‌ನಿಂದ ತಯಾರಿಸಿದ ರಾಷ್ಟ್ರಧ್ವಜ ಬಳಕೆಗೆ ಅವಕಾಶ ನೀಡಲಾಗಿತ್ತು. ಇದಕ್ಕೂ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.
‘ನೆಹರು ಅವರು ಭಾರತದ ಸ್ವಾತಂತ್ರ್ಯದ ಜೀವಾಳ ಎಂದು ಬಣ್ಣಿಸಿದ್ದ ಖಾದಿ ಮತ್ತು ಅದರಿಂದ ರಾಷ್ಟ್ರಧ್ವಜ ತಯಾರಿಸುವವರ ಜೀವನವನ್ನು ಹಾಳು ಮಾಡುತ್ತಿರುವವರ, ನಾಗ್ಪುರದ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು 52 ವರ್ಷ ತೆಗೆದುಕೊಂಡ ಸಂಘಟನೆಯ ಪ್ರಚಾರಕರ ಬೂಟಾಟಿಕೆಗೆ ಜಿಂದಾಬಾದ್!’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.