ನವದೆಹಲಿ: ಇದೇ ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಕೋಟಿ ದಾಟಿದೆ. ಖಾದಿ ಮತ್ತು ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಾಸಿಕ ‘ಮನ್ ಕೀ ಬಾತ್’ ರೇಡಿಯೊ ಪ್ರಸಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಹಿಂದೆ ಖಾದಿ ಉತ್ಪನ್ನಗಳನ್ನು ಬಳಸದ ಜನರು ಈಗ ಹೆಮ್ಮೆಯಿಂದ ಖಾದಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಖಾದಿ ಗ್ರಾಮೋದ್ಯೋಗ ಉದ್ಯಮದ ವಹಿವಾಟು ₹1.5 ಲಕ್ಷ ಕೋಟಿ ದಾಟಿದೆ. ಅಲ್ಲದೆ, ಖಾದಿ ಮಾರಾಟವು ಶೇ 400ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಖಾದಿ ಮತ್ತು ಕೈಮಗ್ಗ ಉದ್ಯಮವು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ’ ಎಂದು ಹೇಳಿದ್ದಾರೆ.
‘ಈ ಉದ್ಯಮದೊಂದಿಗೆ ಮಹಿಳೆಯರು ಹೆಚ್ಚಾಗಿ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಅವರು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಈವರೆಗೆ ಖಾದಿ ಬಟ್ಟೆ ಖರೀದಿಸದಿದ್ದರೆ, ಇನ್ನು ಮುಂದೆ ಖರೀದಿಸಲು ಪ್ರಾರಂಭಿಸಿ’ ಎಂದು ಜನರಿಗೆ ಸಲಹೆ ನೀಡಿದರು.
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಒಲಿಂಪಿಕ್‌ನಲ್ಲಿನ ಕ್ರೀಡೆಗಳು ನಮ್ಮ ಕ್ರೀಡಾಪಟುಗಳಿಗೆ ಭಾರತದ ಧ್ವಜವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲು ಅವಕಾಶವನ್ನು ನೀಡುತ್ತವೆ. ಆದ್ದರಿಂದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಹಾಗೂ ಭಾರತವನ್ನು ಹುರಿದುಂಬಿಸಿ ಎಂದು ಜನರಲ್ಲಿ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.