ವಯನಾಡ್ (ಕೇರಳ): ವಯನಾಡ್‌ನಲ್ಲಿ ಭೂಕುಸಿತದಿಂದ ಸಂಕಷ್ಟಕ್ಕೀಡಾದವರಿಗೆ ಮಾತುಕೊಟ್ಟಂತೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಿಯಾಂಕಾ ಗಾಂಧಿ ಪರ ನಿಲಂಬುರ್‌ನಲ್ಲಿ ಖರ್ಗೆ ಗುರುವಾರ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಮೋದಿ ಒಬ್ಬ ಸುಳ್ಳುಗಾರ’ ಎಂದು ಜರಿದರು.
‘ಕೇರಳ ಸರ್ಕಾರ, ಪರಿಹಾರವಾಗಿ ₹2 ಸಾವಿರ ಕೋಟಿ ನೀಡುವಂತೆ ಹಾನಿಯ ಮಾಹಿತಿಯನ್ನು ನೀಡಿದರೂ ಕೇಂದ್ರ ₹291 ಕೋಟಿ ಹಣವನ್ನು ಮಾತ್ರ ಮಂಜೂರು ಮಾಡಿದೆ. ಇದಕ್ಕಾಗಿಯೇ ಮೋದಿ ಒಬ್ಬ ಬೋಗಸ್ ಮನುಷ್ಯ ಎಂದು ನಾನು ಯಾವಾಗಲೂ ಹೇಳುವುದು’ ಎಂದು ಟೀಕಿಸಿದರು.
‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ತಾರತಮ್ಯ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಪರಿಹಾರವಾಗಿ ಸಿಂಹಪಾಲು ದೊರೆತಿದೆ. ಕಾಂಗ್ರೆಸ್ ಪಕ್ಷ ಯಾವ ರಾಜ್ಯಕ್ಕೂ ಯಾವಾಗಲೂ ತಾರತಮ್ಯ ಮಾಡಲಿಲ್ಲ. ನಾವು ಒಳಗೊಳ್ಳುವಿಕೆ, ನ್ಯಾಯಕ್ಕೆ ಬದ್ಧರಾಗಿರುತ್ತೇವೆ’ ಎಂದರು.
ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಖರ್ಗೆ. ‘ನರೇಂದ್ರ ಮೋದಿ ಸರ್ಕಾರ ನಮ್ಮ ಏಕತೆಯ ಬಟ್ಟೆಯನ್ನು ಹರಿದು ಹಾಕುತ್ತಿದೆ. ಸೌಹಾರ್ದತೆ ಬೆಳೆಸುವ ಬದಲು ಒಡಕು, ಕ್ರೋಧ, ಭಯವನ್ನು ಹರಡಲು ಮುಂದಾಗಿದೆ. ಅವರು ನಮ್ಮನ್ನು ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಾರೆ, ಆದರೆ ನಾನು ವಯನಾಡ್‌ನ ಜನರನ್ನು ನಂಬುತ್ತೇನೆ. ಖಂಡಿತವಾಗಿ ಬೆಜೆಪಿಯವರು ಜನರನ್ನು ವಿಭಜಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
ನ.13 ರಂದು ವಯನಾಡ್‌ನಲ್ಲಿ ಉಪ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.