ನವದೆಹಲಿ: ವೈಯಕ್ತಿಕ ಕಾರಣಗಳನ್ನು ನೀಡಿ ಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ಅವರು ರಾಜೀನಾಮೆ ನೀಡಿರುವುದನ್ನು ಗಮನಿಸಿದರೆ, ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಅವರನ್ನು ಹೊರದೂಡಿರುವಂತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಸಾಂಸ್ಥಿಕವಾಗಿ ಸ್ವಾಧೀನಪಡಿಸಿಕೊಳ್ಳಲು ವ್ಯವಸ್ಥಿತವಾಗಿ ತೊಡಗಿಕೊಂಡಿರುವ ಬಿಜೆಪಿ– ಆರ್‌ಎಸ್‌ಎಸ್, ಆ ಸಂಸ್ಥೆಗಳ ಖ್ಯಾತಿ, ಸಮಗ್ರತೆ ಮತ್ತು ಸ್ವಾಯತ್ತತೆಗೆ ಹಾನಿ ಮಾಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ.
‘ಯುಪಿಎಸ್‌ಸಿಯನ್ನು ಸುತ್ತಿಕೊಂಡಿರುವ ಬಹು ಹಗರಣಗಳು ರಾಷ್ಟ್ರೀಯ ಕಳವಳಕ್ಕೆ ಕಾರಣವಾಗಿವೆ. ಇದರಿಂದ ಪ್ರಧಾನಿ ಮೋದಿ ಮತ್ತು ಅವರ ಸಿಬ್ಬಂದಿ, ಸಾರ್ವಜನಿಕ ಮತ್ತು ಪಿಂಚನಿ ಸಚಿವರು ಪರಿಶುದ್ಧರಾಗಿ ಬರಬೇಕು. ಜಾತಿ ಮತ್ತು ವೈದ್ಯಕೀಯ ಪ್ರಮಾಣಪತ್ರಗಳನ್ನು ನಕಲಿ ಮಾಡಿರುವ ಹಲವು ಅನರ್ಹ ವ್ಯಕ್ತಿಗಳು ಇಡೀ ವ್ಯವಸ್ಥೆಯನ್ನೇ ವಂಚಿಸಿದ್ದಾರೆ’ ಎಂದು ಖರ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಮೂಲಕ ಅವರು, ನಾಗರಿಕ ಸೇವಾ ಪರೀಕ್ಷೆಗಳಿಗೆ ಮಧ್ಯರಾತ್ರಿವರೆಗೂ ಕಷ್ಟಪಟ್ಟು ಓದಿದ ಎಸ್‌ಸಿ, ಎಸ್‌ಟಿ, ಒಬಿಸಿ, ಇಡಬ್ಲ್ಯುಎಸ್ ಪ್ರವರ್ಗಗಳ ಲಕ್ಷಾಂತರ ಆಕಾಂಕ್ಷಿಗಳಿಗೆ ನೇರವಾಗಿ ಅವಮಾನ ಮಾಡಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.
‘ಯುಪಿಎಸ್‌ಸಿ ಅಧ್ಯಕ್ಷರು ತಮ್ಮ ಅವಧಿ ಮುಗಿಯುವ ಐದು ವರ್ಷಗಳ ಮುನ್ನ ಏಕೆ ರಾಜೀನಾಮೆ ನೀಡಿದರು ಎಂಬುದು ಗೊಂದಲ ಮೂಡಿಸಿದೆ. ಅಲ್ಲದೆ ಅವರ ರಾಜೀನಾಮೆಯನ್ನು ಒಂದು ತಿಂಗಳು ಏಕೆ ರಹಸ್ಯವಾಗಿಡಲಾಗಿತ್ತು? ನಡೆದಿರುವ ಹಲವು ಹಗರಣಗಳು ಮತ್ತು ರಾಜೀನಾಮೆ ನಡುವೆ ಏನಾದರೂ ಸಂಬಂಧವಿದೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಮೋದಿ ಅವರ ಅಪ್ತರಾಗಿದ್ದ ಅವರನ್ನು ಗುಜರಾತಿನಿಂದ ಕರೆತಂದು, ಯುಪಿಎಸ್‌ಸಿ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿತ್ತು’ ಎಂದು ಅವರು ಸ್ಮರಿಸಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಾಗರಿಕ ಸೇವಾ ಅಧಿಕಾರಿಗಳನ್ನು ‘ಭಾರತದ ಉಕ್ಕಿನ ಚೌಕಟ್ಟು’ ಎಂದು ಉಲ್ಲೇಖಿಸಿದ್ದರು. ಆದರೆ ಮೋದಿ ಸರ್ಕಾರವು ಅದಕ್ಕೆ ರಂಧ್ರ ಕೊರೆದಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಮೋಸ ಮತ್ತು ವಂಚನೆ ಮೂಲಕ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಪ್ರಕರಣಗಳು ಭವಿಷ್ಯದಲ್ಲಿ ನಡೆಯದಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ ಈ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.