ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಮೇಲ್ಮನೆಗೆ ಬಂದರೆ ಏನಾದರೂ ಸಂಭವಿಸಲಿದೆಯೇ? ಅವರು ‘ಪರಮಾತ್ಮ’ನೇ? ಮೋದಿ ಖಂಡಿತ ದೇವರಲ್ಲ’ ಎಂದು ಕಾಂಗ್ರೆಸ್ ಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗುರುವಾರ ಬೆಳಿಗ್ಗೆ ರಾಜ್ಯಸಭೆಯಲ್ಲಿ ಕಲಾಪ ಶುರುವಾದಾಗ ಸಭಾಪತಿ ಜಗದೀಪ್ ಧನಕರ್ ಅವರಿಗೆ ‘ಪ್ರಧಾನಿ ಅವರ ಉಪಸ್ಥಿತಿಯಲ್ಲಿ ನಿಯಮ 167ರ ಅಡಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆರಂಭಿಸಬೇಕು’ ಎಂದು ಖರ್ಗೆ ಕೋರಿದರು.
ಇದಕ್ಕೆ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ಸಚಿವರು ಹಾಗೂ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಖರ್ಗೆ ಹಾಗೂ ಆಡಳಿತಾರೂಢ ಸದಸ್ಯರ ನಡುವೆ ವಾಗ್ದಾಳಿ ನಡೆಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರಿಂದ ಮಧ್ಯಾಹ್ನ 2ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.
ಮೊದಲು ನಡೆದಿದ್ದೇನು?:
ಕಲಾಪ ಆರಂಭಗೊಂಡಾಗ ಮಣಿಪುರ ಸಂಘರ್ಷವೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಕೋರಿ ಹಲವು ನೋಟಿಸ್‌ಗಳು ಸಲ್ಲಿಕೆಯಾಗಿದ್ದವು.
‘ನಿಯಮ 167ರ ಅಡಿ ಮಣಿಪುರ ವಿಷಯ ಕುರಿತ ಚರ್ಚೆಗೆ ಮೂರು ನೋಟಿಸ್ ಸಲ್ಲಿಕೆಯಾಗಿವೆ. ನಿಯಮ 168ರ ಅಡಿ ಚರ್ಚೆಗೆ ಡಿಎಂಕೆಯ ತಿರುಚಿ ಶಿವ, ಸಿಪಿಐನ ಬಿನೋಯ್ ವಿಶ್ವಂ ಹಾಗೂ ಸಿಪಿಎಂನ ಎಲಮರಂ ಕರೀಂ ಅವರು ನೋಟಿಸ್ ಸಲ್ಲಿಸಿದ್ದಾರೆ’ ಎಂದು ಸಭಾಪತಿ ಧನಕರ್ ತಿಳಿಸಿದರು.
‘ಜುಲೈ 31ರಂದೇ ಮಣಿಪುರ ಕುರಿತ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ವಿರೋಧ ಪಕ್ಷಗಳ ಸದಸ್ಯರು ಅಡ್ಡಿಪಡಿಸಿದ್ದರಿಂದ ಇದು ಫಲಪ್ರದವಾಗಿಲ್ಲ. ಹಾಗಾಗಿ, ಯಾವ ವಿಷಯ ಕುರಿತು ಮೊದಲು ಚರ್ಚೆ ಆರಂಭಿಸಬೇಕು ಎನ್ನುವುದನ್ನು ನೀವೇ ನಿರ್ಧರಿಸಿ’ ಎಂದು ಹೇಳಿದರು.
ಆಡಳಿತ ಪಕ್ಷದ ಸಭಾ ನಾಯಕ ಪೀಯೂಷ್ ಗೋಯಲ್, ‘ಸುಗಮ ಕಲಾಪಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸರ್ಕಾರ ಸಿದ್ಧವಿತ್ತು. ಆದರೆ, ವಿರೋಧ ಪಕ್ಷಗಳ ಸದಸ್ಯರು ಇದಕ್ಕೆ ಸಮ್ಮತಿಸುತ್ತಿಲ್ಲ’ ಎಂದು ಆಪಾದಿಸಿದರು.
‘ನಾನು ಹಾಗೂ ಸಚಿವ ಪ್ರಲ್ಹಾದ ಜೋಶಿ ಅವರು ‘ಇಂಡಿಯಾ’ ಸದಸ್ಯರ ಮನವೊಲಿಸಲು ಪ್ರಯತ್ನಿಸಿದೆವು. ಚರ್ಚೆಯಲ್ಲಿ ಮೋದಿ ಹಾಜರಿರಬೇಕೆಂದು ಷರತ್ತು ವಿಧಿಸಿದರು. ಇದಕ್ಕೆ ಜೋಶಿ ಅವರು ಒಪ್ಪಿಗೆ ಸೂಚಿಸಲಿಲ್ಲ’ ಎಂದು ಸದನಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ನಿಯಮ 167ರ ಅಡಿ ಚರ್ಚೆಗೆ ನೀವು ಒಪ್ಪಿದ್ದೀರಿ. ಪ್ರಸ್ತಾವ ಮಂಡಿಸಿದ್ದ ನೀವೇ ಈಗ ವಿರುದ್ಧವಾಗಿ ಮಾತನಾಡುತ್ತಿದ್ದೀರಿ. ಈ ನಿಯಮದಡಿ ಈಗ ಚರ್ಚೆ ಆರಂಭಿಸಲು ನಿಮಗಿರುವ ಸಮಸ್ಯೆಯಾದರೂ ಏನು’ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಸದಸ್ಯ ತಿರುಚಿ ಶಿವ, ‘ಮಣಿಪುರ ಸಂಘರ್ಷ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂಬುದಷ್ಟೇ ನಮ್ಮ ಒತ್ತಾಯ. ನಾವು ಒಂದೇ ಮಾನದಂಡಕ್ಕೆ ಅಂಟಿಕೊಳ್ಳಬಾರದು. ಸರ್ಕಾರವೂ ಇದೇ ಹಾದಿ ತುಳಿಯಬಾರದು’ ಎಂದರು.
ಆಗ ಧನಕರ್, ‘ಎರಡೂ ಕಡೆಯವರು ಗಟ್ಟಿ ನಿಲುವಿಗೆ ಅಂಟಿಕೊಂಡಿದ್ದಾರೆ. ಹಾಗಾಗಿ, ಕಣಿವೆ ರಾಜ್ಯದ ಸಂಘರ್ಷ ಕುರಿತ ಚರ್ಚೆಗೆ ಅಡ್ಡಿಯಾಗಿದೆ. ಇದು ನನಗೆ ವೈಯಕ್ತಿಕವಾಗಿ ನೋವು ತಂದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.