ADVERTISEMENT

ಮೂಲ ಸ್ಥಾನದಲ್ಲಿ ಗಾಂಧಿ, ಅಂಬೇಡ್ಕರ್‌ ಪ್ರತಿಮೆ ಮರುಸ್ಥಾಪಿಸಿ: ಖರ್ಗೆ

ಸಂಸತ್‌ ಸಂಕೀರ್ಣ; ಹೊಸ ಸ್ಥಳಗಳಿಗೆ ಗಾಂಧಿ, ಅಂಬೇಡ್ಕರ್‌ ಪ್ರತಿಮೆ, ಸ್ಪೀಕರ್‌, ಸಭಾಪತಿಗೆ ಪತ್ರ

ಪಿಟಿಐ
Published 19 ಜೂನ್ 2024, 14:31 IST
Last Updated 19 ಜೂನ್ 2024, 14:31 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ : ಸಂಸತ್‌ ಸಂಕೀರ್ಣದ ಹೊಸ ಸ್ಥಳಗಳಿಗೆ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಇತರ ರಾಷ್ಟ್ರೀಯ ನಾಯಕರ ಪ್ರತಿಮೆಗಳ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಲೋಕಸಭಾ ಸ್ಪೀಕರ್‌ ಮತ್ತು ರಾಜ್ಯ ಸಭೆಯ ಸಭಾಪತಿಯವರಿಗೆ ಪತ್ರ ಬರೆದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರತಿಮೆಗಳನ್ನು ಅವುಗಳ ಮೂಲ ಸ್ಥಾನದಲ್ಲೇ ಮರುಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

ಇಬ್ಬರಿಗೂ ಪ್ರತ್ಯೇಕವಾಗಿ ಪತ್ರ ಬರೆದಿರುವ ಅವರು, ‘ಪ್ರತಿಮೆಗಳನ್ನು ಸ್ಥಳಾಂತರಿಸುವ ಬಗ್ಗೆ ಯಾರೊಂದಿಗೂ ಚರ್ಚಿಸದೆ, ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಒಂದು ಮೂಲೆಯಲ್ಲಿ ಸ್ಥಾಪಿಸಲಾಗಿದೆ. ಇದು ಪ್ರಜಾಪ್ರಭುತ್ವದ ಮೂಲತತ್ವದ ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ. 

‘ಈ ಹಿಂದೆ ಸಂಬಂಧಿಸಿದ ಎಲ್ಲರೊಂದಿಗೆ ಚರ್ಚಿಸಿ ಗಾಂಧೀಜಿ, ಅಂಬೇಡ್ಕರ್‌ ಹಾಗೂ ಇತರ ನಾಯಕರ ಪ್ರತಿಮೆಗಳನ್ನು ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗಿತ್ತು. ಸಂಸತ್‌ ಸಂಕೀರ್ಣದ ಆವರಣದಲ್ಲಿದ್ದ ಪ್ರತಿ ಪ್ರತಿಮೆ ಹಾಗೂ ಅವುಗಳಿದ್ದ ಸ್ಥಳಗಳು ಅಪಾರ ಮೌಲ್ಯ ಮತ್ತು ಪ್ರಾಮುಖ್ಯ ಹೊಂದಿದ್ದವು’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ಪತ್ರದಲ್ಲಿ ಹೇಳಿದ್ದಾರೆ. 

ADVERTISEMENT

‘ಸಂಸತ್‌ ಭವನದ ಸಂಕೀರ್ಣದಲ್ಲಿ ರಾಷ್ಟ್ರೀಯ ನಾಯಕರು, ಸಂಸದರ ಪ್ರತಿಮೆ ಭಾವಚಿತ್ರಗಳನ್ನು ಅಳವಡಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಪ್ರತ್ಯೇಕ ಸಮಿತಿ ಇದೆ. ಆದರೆ 2019ರ ನಂತರ ಈ ಸಮಿತಿಯನ್ನು ಪುನರ್‌ರಚಿಸಿಲ್ಲ’ ಎಂದು ಅವರು ದೂರಿದ್ದಾರೆ.  

‘ಸಂಬಂಧಪಟ್ಟ ಪಾಲುದಾರರೊಂದಿಗೆ ಸಮರ್ಪಕ ಚರ್ಚೆ ನಡೆಸದೆ ತೆಗೆದುಕೊಂಡಿರುವ ಇಂತಹ ನಿರ್ಧಾರಗಳು ನಮ್ಮ ಸಂಸತ್ತಿನ ನಿಯಮಗಳು ಮತ್ತು ಸಂಪ್ರದಾಯಗಳಿಗೆ ವಿರುದ್ಧವಾದುದು. ಹಾಗಾಗಿ, ಈ ದೇಶದ ಏಕತೆ ಮತ್ತು ಸಮಗ್ರತೆಗೆ ಕೊಡುಗೆಗಳನ್ನು ನೀಡಿದ ರಾಷ್ಟ್ರನಾಯಕರ ಪ್ರತಿಮೆಗಳನ್ನು ಹಿಂದೆ ಇದ್ದ ಸ್ಥಳಗಳಲ್ಲೇ ಗೌರವಯುತವಾಗಿ ಸ್ಥಾಪಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ. 

ಪ್ರತಿಮೆಗಳ ಸ್ಥಳಾಂತರವನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿತ್ತು. ವಿರೋಧ ಪಕ್ಷಗಳು ಗಾಂಧಿ ಮತ್ತು ಅಂಬೇಡ್ಕರ್‌ ಅವರ ಪ್ರತಿಮೆಗಳ ಮುಂಭಾಗ  ಪ್ರತಿಭಟನೆಯನ್ನೂ ನಡೆಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.