ADVERTISEMENT

ಹರಿಯಾಣ: ಸಿಎಂ ಸ್ಥಾನಕ್ಕೆ ರಾಜೀನಾಮೆ, ಲೋಕಸಭೆಗೆ ಸ್ಪರ್ಧೆ; ಸುಳಿವು ನೀಡಿದ ಖಟ್ಟರ್

ಪಿಟಿಐ
Published 13 ಮಾರ್ಚ್ 2024, 2:45 IST
Last Updated 13 ಮಾರ್ಚ್ 2024, 2:45 IST
<div class="paragraphs"><p>ಮನೋಹರ್ ಲಾಲ್ ಖಟ್ಟರ್</p></div>

ಮನೋಹರ್ ಲಾಲ್ ಖಟ್ಟರ್

   

(ಪಿಟಿಐ ಚಿತ್ರ)

ಚಂಡೀಗಢ: ಹರಿಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ಹಠಾತ್ತನೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ಬಳಿಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಬಿಜೆಪಿ ನಾಯಕ ಮನೋಹರ್ ಲಾಲ್ ಖಟ್ಟರ್ ಸುಳಿವು ನೀಡಿದ್ದಾರೆ.

ADVERTISEMENT

'ಪಕ್ಷವು ನನಗೆ ಮಗದೊಂದು ಜವಾಬ್ದಾರಿ ನೀಡುವುದಾಗಿ ಹೇಳಿದೆ. ಅದನ್ನು ಶೀಘ್ರದಲ್ಲೇ ನಿರ್ಧರಿಸಬಹುದು. ಬಹುಶಃ ಅದು ಲೋಕಸಭೆ ಚುನಾವಣೆ ಆಗಿರಬಹುದು. ಅದು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಬಿಜೆಪಿಯ ಸಂಸದೀಯ ಮಂಡಳಿ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧವಾಗಿರುತ್ತೇನೆ' ಎಂದು ತಿಳಿಸಿದರು.

ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮನೋಹರಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮತ್ತು ಅವರ ಸಂಪುಟದ ಸದಸ್ಯರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಬಿಜೆಪಿ ಮುಖಂಡ ನಾಯಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಖಟ್ಟರ್ ಅವರನ್ನು ಕರನಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹರಿಯಾಣದಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವಿನ ಮೈತ್ರಿಯು ಅಂತ್ಯಗೊಳ್ಳುತ್ತಿದೆ ಎಂಬ ಊಹಾಪೋಹಗಳ ನಡುವೆ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಆದರೆ ಬಿಜೆಪಿ ಹಾಗೂ ಜೆಜೆಪಿ ಮೈತ್ರಿ ಸರ್ಕಾರದ ನಾಯಕರು ಈ ಕುರಿತು ಪ್ರತಿಕ್ರಿಯೆ ನೀಡಲಿಲ್ಲ.

ಹರಿಯಾಣದ ಎಲ್ಲ 10 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಬಿಜೆಪಿ ಗುರಿಯಾಗಿದೆ. ಜೆಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿರುವುದಾಗಿ ಖಟ್ಟರ್ ತಿಳಿಸಿದರು.

ಒಬಿಸಿ ಸಮುದಾಯದ ಪ್ರಮುಖ ನಾಯಕ ನಾಯಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಖಟ್ಟರ್, 'ಹೊಸಬರಿಗೆ ಅವಕಾಶ ನೀಡುವುದು ಬಿಜೆಪಿ ಸಂಪ್ರದಾಯವಾಗಿದೆ. ಲೋಕಸಭೆ ಚುನಾವಣೆ ಸನಿಹದಲ್ಲಿದೆ. ಪಕ್ಷದ ಸಂಸದೀಯ ಮಂಡಳಿಯು ಹೊಸ ನಾಯಕತ್ವವನ್ನು ತರಲು ನಿರ್ಧರಿಸಿತು. ಸೈನಿ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ನಾಯಕತ್ವ ಬಂದಿರುವುದು ಸಂತಸ ತಂದಿದೆ' ಎಂದು ಹೇಳಿದರು.

ಕೆಲವು ದಿನಗಳ ಹಿಂದೆ ಹೊಸ ನಾಯಕತ್ವ ತರಲು ಬಯಸುವುದಾದರೆ ಬದಲಾವಣೆ ಮಾಡಬಹುದು ಎಂದು ತಾವೇ ಸೂಚನೆ ನೀಡಿರುವುದಾಗಿಯೂ ಖಟ್ಟರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.