ADVERTISEMENT

ಆರು ಜನರ ಹತ್ಯೆ: ಕುಕಿ ಬಂಡುಕೋರರ ವಿರುದ್ಧ ಮಣಿಪುರ ಸಿಎಂ ಆಕ್ರೋಶ

ಪಿಟಿಐ
Published 20 ನವೆಂಬರ್ 2024, 14:30 IST
Last Updated 20 ನವೆಂಬರ್ 2024, 14:30 IST
ಎನ್‌.ಬಿರೇನ್‌ ಸಿಂಗ್
ಎನ್‌.ಬಿರೇನ್‌ ಸಿಂಗ್   

ಇಂಫಾಲ: ‘ಆರು ಜನ ಅಮಾಯಕರ ಹತ್ಯೆಗೆ ಕಾರಣರಾದ ಕುಕಿ ಬಂಡುಕೋರರಿಗೆ ಕಠಿಣ ಶಿಕ್ಷೆ ಆಗುವವರೆಗೆ ಸರ್ಕಾರ ವಿರಮಿಸದು’ ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್ ಹೇಳಿದ್ದಾರೆ. 

ಹತ್ಯೆಕೋರರ ಪತ್ತೆಗೆ ಶೋಧ ನಡೆದಿದೆ. ಮೂವರು ಮಹಿಳೆಯರು, ಮೂವರು ಮಕ್ಕಳ ಶವಗಳು ಜಿರೀಬಾಮ್‌ ಜಿಲ್ಲೆಯಲ್ಲಿ ನದಿಯಲ್ಲಿ ಪತ್ತೆ ಆಗಿವೆ. ಈ ಹತ್ಯೆ ಮಾನವೀಯತೆ ಮೇಲಿನ ಅಪರಾಧವಾಗಿದೆ ಎಂದಿದ್ದಾರೆ.. 

‘ಎಕ್ಸ್‌’ ಜಾಲತಾಣದಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಅವರು, ‘ಬಂಡುಕೋರರು ಒತ್ತೆ ಇರಿಸಿಕೊಂಡಿದ್ದವರ ಭೀಕರ ಹತ್ಯೆಯನ್ನು ಖಂಡಿಸುತ್ತೇನೆ. ನನಗೆ ತೀವ್ರ ದುಃಖವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ನ.11ರಂದು ಕು‌ಕಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆದು, ಜಿರೀಬಾಮ್‌ನ ಶಿಬಿರದಿಂದ ಆರು ಮಂದಿ ನಾಪತ್ತೆಯಾಗಿದ್ದರು. ಅಂದು 40–50 ಶಸ್ತ್ರಸಜ್ಜಿತ ಬಂಡುಕೋರರು ದಾಳಿ ಮಾಡಿದ್ದರು. 

ಅಮಾಯಕರ ಹತ್ಯೆ ಕೃತ್ಯಗಳಿಗೆ ನಾಗರಿಕ ಸಮಾಜದಲ್ಲಿ ಅವಕಾಶವಿಲ್ಲ ಬಂಡುಕೋರರಿಗೆ ತಕ್ಕ ಶಿಕ್ಷೆ ಆಗಲಿದೆ. ನೊಂದವರಿಗೆ ನ್ಯಾಯ ಸಿಗಲಿದೆ.
ಎನ್‌.ಬಿರೇನ್‌ ಸಿಂಗ್, ಮುಖ್ಯಮಂತ್ರಿ ಮಣಿಪುರ

ದಾಳಿ ನಡೆಸಿದ ಸಂದರ್ಭದಲ್ಲಿ ಅಂದು ಸಿಆರ್‌ಪಿಎಫ್‌ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಶಿಬಿರದಲ್ಲಿದ್ದ ನೂರಾರು ಜನರನ್ನು ರಕ್ಷಣೆ ಮಾಡಿದೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಶಾಂತಿ ನೆಲಸುವ ಸಂಬಂಧ ಕೇಂದ್ರದ ನಾಯಕರು ಅನಿಯಮಿತವಾಗಿ ಬದ್ಧತೆ ತೋರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

ರಾಜ್ಯದಲ್ಲಿ ಸದ್ಯ ಇರುವ ತುಕಡಿಗಳ ಜೊತೆಗೆ ಕೇಂದ್ರ, ಹೆಚ್ಚುವರಿಯಾಗಿ ಸಿಆರ್‌ಪಿಎಫ್‌ನ 20 ಮತ್ತು ಹೆಚ್ಚುವರಿ 50 ಭದ್ರತಾ ಪಡೆಗಳನ್ನು ಈವೆಗೆ ನಿಯೋಜಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ವಾರದ ಮಟ್ಟಿಗೆ ಪ್ರತಿಭಟನೆ ಕೈಬಿಟ್ಟ ಕೊಕೊಮಿ

ಇಂಫಾಲ್‌: ಕುಕಿ ಬಂಡುಕೋರರ ವಿರುದ್ಧ ಸಮಗ್ರ ಕಾರ್ಯಾಚರಣೆಗೆ ಎನ್‌ಡಿಎ ಶಾಸಕರು ನಿರ್ಣಯ ಕೈಗೊಂಡ ಕಾರಣ ಮಣಿಪುರ ಏಕತೆಯ ಸಮನ್ವಯ ಸಮಿತಿ (ಕೊಕೊಮಿ) ವಾರದ ಮಟ್ಟಿಗೆ ಪ್ರತಿಭಟನೆ ಕೈಬಿಟ್ಟಿದೆ.

ಇಂಫಾಲ ಕಣಿವೆಯ ಪ್ರತಿನಿಧಿಗಳಿರುವ ಕೊಕೊಮಿ ನಾಗರಿಕ ಸಂಘಟನೆಯು ಕುಕಿ ಬಂಡುಕೋರರಿಂದ ನಡೆದ ಜನರ ಹತ್ಯೆ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಸುದ್ದಿಗಾರರಿಗೆ ಕೊಕೊಮಿ ಸಂಯೋಜಕ ಸೊಮೊರೆಂದ್ರೊ ಥೊಕ್‌ಚೊಮ್ ಈ ಮಾಹಿತಿ ನೀಡಿದ್ದಾರೆ.

‘ಎನ್‌ಡಿಎ ಶಾಸಕರ ನಿರ್ಣಯ ಆಧರಿಸಿ ವಾರದ ಮಟ್ಟಿಗೆ ಪ್ರತಿಭಟನೆ ಹಿಂಪಡೆದಿದ್ದೇವೆ. ನಂತರದ ಬೆಳವಣಿಗೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು. ತಕ್ಷಣಕ್ಕೆ ಪ್ರತಿಭಟನೆ ಕೈಬಿಡುವ ಕೊಕೊಮಿ ನಿರ್ಧಾರವನ್ನು ವಿವಿಧ ಮಹಿಳಾ ಸಂಘಟನೆಗಳು ವಿರೋಧಿಸಿವೆ. ಪ್ರತಿಭಟನೆಯನ್ನು ಮುಂದುವರಿಸಬೇಕು ಎಂದು ಪಟ್ಟುಹಿಡಿದಿವೆ.

ಕರ್ಫ್ಯೂ ಜಾರಿ; ಮೊಬೈಲ್ ಇಂಟರ್‌ನೆಟ್‌ ನಿರ್ಬಂಧ ಮುಂದುವರಿಕೆ

ಇಂಫಾಲ್: ಮುನ್ನೆಚ್ಚರಿಕೆಯಾಗಿ ಮಣಿಪುರದಲ್ಲಿ ವಿಧಿಸಲಾಗಿದ್ದ ಮೊಬೈಲ್ ಇಂಟರ್‌ನೆಟ್‌ ಸೇವೆ ಮೇಲಿನ ನಿರ್ಬಂಧವನ್ನು ಏಳು ಜಿಲ್ಲೆಗಳಿಗೆ ಅನ್ವಯಿಸಿ ಇನ್ನೂ ಮೂರು ದಿನದ ಮಟ್ಟಿಗೆ (ನ.22ರವರೆಗೆ) ಮುಂದುವರಿಸಲಾಗಿದೆ.

ಸಮಾಜವಿರೋಧಿ ಶಕ್ತಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸದಿರಲಿ ಎಂದು ನ. 16ರಂದು ಎರಡು ದಿನದ ಮಟ್ಟಿಗೆ ನಿರ್ಬಂಧ ಹೇರಲಾಗಿತ್ತು. ಸೋಮವಾರ ಮತ್ತೆರಡು ದಿನಗಳಿಗೆ ವಿಸ್ತರಿಸಲಾಗಿತ್ತು. ಸಾಮಾನ್ಯ ಜನತೆ ಆರೋಗ್ಯ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಗುತ್ತಿರುವ ಅನನುಕೂಲತೆಯನ್ನು ಪರಿಗಣಿಸಿ ಬ್ರಾಡ್‌ಬ್ಯಾಂಡ್‌ ಸೇವೆಗಳ ಮೇಲಿನ ನಿರ್ಬಂಧವನ್ನು ಮಂಗಳವಾರ ಹಿಂಪಡೆಯಲಾಗಿತ್ತು.

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಅಮಾಯಕರ ಹತ್ಯೆ ಖಂಡಿಸಿ ಮತ್ತು ಆಫ್‌ಸ್ಪಾ ಕಾಯ್ದೆ ಜಾರಿಯನ್ನು ವಿರೋಧಿಸಿ ಮಹಿಳೆಯರು ಇಂಫಾಲದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.