ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ‘ಪಾತಕಿ, ಮಾಜಿ ಸಂಸದ ಅತೀಕ್ ಅಹಮದ್ ಹಾಗೂ ಆತನ ತಮ್ಮ ಅಶ್ರಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದಡಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ.
ಶಹಾಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಶ್ವನಿಕುಮಾರ್ ಸಿಂಗ್, ಒಬ್ಬರು ಸಬ್ ಇನ್‌ಸ್ಪೆಕ್ಟರ್ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ಅಮಾನತುಗೊಂಡಿದ್ದಾರೆ.
‘ಐವರು ಸಿಬ್ಬಂದಿ ಕರ್ತವ್ಯ ಲೋಪ ಎಸಗಿರುವುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರನ್ನು ಅಮಾನತು ಮಾಡಿದ್ದೇವೆ’ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಹಂತಕರು ಪೊಲೀಸರ ವಶಕ್ಕೆ: ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅತೀಕ್ ಹಾಗೂ ಅಶ್ರಫ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ನಾಲ್ಕು ದಿನಗಳವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಆರೋಪಿಗಳಾದ ಲವ್ಲೇಶ್ ತಿವಾರಿ, ಮೋಹಿತ್ ಹಾಗೂ ಅರುಣ್‌ಕುಮಾರ್ ಮೌರ್ಯ ಅವರನ್ನು ಭಾರಿ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಎದುರು ಒಪ್ಪಿಸಿದ ಪೊಲೀಸರು, ಮೂವರನ್ನೂ ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.
‘ನ್ಯಾಯಾಲಯವು ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಇದೇ 23ರ ಸಂಜೆ 5 ಗಂಟೆವರೆಗೂ ಆರೋಪಿಗಳನ್ನು ಪೊಲೀಸರ ಸುಪರ್ದಿಗೆ ಒಪ್ಪಿಸಿದೆ’ ಎಂದು ಸರ್ಕಾರಿ ವಕೀಲ ಗುಲಾಬ್ ಚಂದ್ರ ಅಗ್ರಹಾರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.