ADVERTISEMENT

ಅಂದು ಕಿಂಗ್ ಮೇಕರ್, ಇಂದು ಶೂನ್ಯ ಸಾಧನೆ: ಹರಿಯಾಣದಲ್ಲಿ ಮುಗ್ಗರಿಸಿದ ಜೆಜೆಪಿ

ಪಿಟಿಐ
Published 8 ಅಕ್ಟೋಬರ್ 2024, 13:08 IST
Last Updated 8 ಅಕ್ಟೋಬರ್ 2024, 13:08 IST
<div class="paragraphs"><p>ಜೆಜೆಪಿ ಪಕ್ಷದ ಲಾಂಛನ ಮತ್ತು&nbsp;ದುಷ್ಯಂತ್ ಚೌತಾಲ</p></div>

ಜೆಜೆಪಿ ಪಕ್ಷದ ಲಾಂಛನ ಮತ್ತು ದುಷ್ಯಂತ್ ಚೌತಾಲ

   

ಚಿತ್ರಕೃಪೆ: ಪಿಟಿಐ ಮತ್ತು ವಿಕಿಪೀಡಿಯ

ಚಂಡೀಗಢ: 2019ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಿಂಗ್‌ ಮೇಕರ್ ಆಗಿದ್ದ ‘ಜನನಾಯಕ ಜನತಾ ಪಕ್ಷ’(ಜೆಜೆಪಿ), ಈ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲ್ಲಾಗದೇ ಹೀನಾಯವಾಗಿ ಸೋತಿದೆ. ಈ ಮೂಲಕ ಠೇವಣಿ ಉಳಿಸಿಕೊಳ್ಳುವಲ್ಲಿಯೂ ಅದು ವಿಫಲವಾಗಿದೆ.

ADVERTISEMENT

ಚೌಟಾಲ ಕುಟುಂಬದ ಆಂತರಿಕ ಕಲಹದಿಂದಾಗಿ 2018ರಲ್ಲಿ ಮಾತೃ ಪಕ್ಷ ‘ಭಾರತೀಯ ರಾಷ್ಟ್ರೀಯ ಲೋಕದಳ’(ಐಎನ್‌ಎಲ್‌ಡಿ) ವಿಭಜನೆಗೊಂಡು ಜನನಾಯಕ ಜನತಾ ಪಕ್ಷ ಹುಟ್ಟುಕೊಂಡಿತ್ತು. ಅಜಯ್‌ ಸಿಂಗ್ ಚೌಟಾಲ ಅವರ ನೇತೃತ್ವದಲ್ಲಿ 2019 ಚುನಾವಣೆ ಎದುರಿಸಿದ್ದ ಜೆಜೆಪಿ, 10 ಸ್ಥಾನಗಳನ್ನು ಗೆದ್ದು ಕಿಂಗ್ ಮೇಕರ್ ಆಗಿತ್ತು. ಸರಳ ಬಹುಮತ ಪಡೆಯುವಲ್ಲಿ ಸೋತ ಬಿಜೆಪಿಯು ಜೆಜೆಪಿಯೊಂದಿಗೆ ಮೈತ್ರಿಯಾಗಿ ಸರ್ಕಾರ ರಚಿಸಿತ್ತು.

ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ ನಂತರ ಬಿಜೆಪಿ ಮತ್ತು ಜೆಜೆಪಿ ನಡುವಿನ ಮೈತ್ರಿ ಹಳಸಿತ್ತು. ಮಾರ್ಚ್‌ನಲ್ಲಿ ಜೆಜೆಪಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿತ್ತು.

ಈ ಬೆಳವಣಿಗೆಗಳ ನಡುವೆಯೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ನಿಶಾನ್ ಸಿಂಗ್ ಅವರು ಪಕ್ಷ ತೊರೆದು ಚುನಾವಣೆಯ ಹೊತ್ತಲ್ಲಿ ಜೆಜೆಪಿಗೆ ಭಾರಿ ಆಘಾತ ನೀಡಿದ್ದರು. ನಿಶಾನ್ ಸಿಂಗ್ ಬೆನ್ನಲ್ಲೇ ಪಕ್ಷದ 7 ಶಾಸಕರು ಪಕ್ಷ ತೊರೆದು ಬಿಜೆಪಿ ಮತ್ತು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಉಚ್ಚನ ಕಾಲನ್ ‌ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಜೆಪಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲ ಅವರೂ ಸೋಲು ಅನುಭವಿಸಿದ್ದಾರೆ. 2019ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ದಲಿತ ಮತ ಸೆಳೆಯಲು ಆಜಾದ್ ಸಮಾಜ ಪಕ್ಷದೊಂದಿಗೆ(ಕಾನ್ಶಿ ರಾಮ್) ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೂ ಜೆಜೆಪಿಗೆ ಯಾವುದೇ ಲಾಭವಾಗಿಲ್ಲ.

ಐಎನ್‌ಎಲ್‌ಡಿ ತೆಕ್ಕೆಗೆ ಎರಡು ಕ್ಷೇತ್ರ

ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಐಎನ್‌ಎಲ್‌ಡಿ, ಕೇವಲ ಎರಡು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.