ADVERTISEMENT

ಕರ್ನಾಟಕದ ಬಿಎಂ ಹೆಗ್ಡೆ ಸೇರಿ ಗಣ್ಯರಿಗೆ 2021ನೇ ಸಾಲಿನ ’ಪದ್ಮ’ ಪ್ರಶಸ್ತಿ ಪ್ರದಾನ

ಪಿಟಿಐ
Published 9 ನವೆಂಬರ್ 2021, 10:54 IST
Last Updated 9 ನವೆಂಬರ್ 2021, 10:54 IST
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಖ್ಯಾತ ವೈದ್ಯ ಮತ್ತು ಶಿಕ್ಷಣ ತಜ್ಞ ಡಾ. ಬಿ. ಎಂ. ಹೆಗಡೆಯವರಿಗೆ  ’ಪದ್ಮ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಿದರು.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಖ್ಯಾತ ವೈದ್ಯ ಮತ್ತು ಶಿಕ್ಷಣ ತಜ್ಞ ಡಾ. ಬಿ. ಎಂ. ಹೆಗಡೆಯವರಿಗೆ ’ಪದ್ಮ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಿದರು.   

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಮಂಗಳವಾರ 2021ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮ’ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕರ್ನಾಟಕದ ಖ್ಯಾತ ವೈದ್ಯ ಹಾಗೂ ಶಿಕ್ಷಣ ತಜ್ಞ ಬಿ.ಎಂ. ಹೆಗ್ಡೆ,ಪುರಾತತ್ವ ಶಾಸ್ತ್ರದ ದಂತಕಥೆ ಬಿ.ಬಿ.ಲಾಲ್ ಅವರಿಗೆ ’ಪದ್ಮವಿಭೂಷಣ’, ಶಿಲ್ಪಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಒಡಿಶಾದ ಖ್ಯಾತ ಶಿಲ್ಪಿ ಸುದರ್ಶನ್ ಸಾಹೂ, ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ’ಪದ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು.

ಎಂಟು ಬಾರಿ ಸಂಸದೆಯಾಗಿದ್ದ ಸುಮಿತ್ರಾ ಮಹಾಜನ್ ಅವರ ಸಾರ್ವಜನಿಕ ಸೇವೆ ಮತ್ತು ಹಿರಿಯ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರ ನಾಗರಿಕ ಸೇವೆಯನ್ನು ಗುರುತಿಸಿ ’ಪದ್ಮ ಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರಿಗೆ(ಮರಣೋತ್ತರವಾಗಿ) ’ಪದ್ಮಭೂಷಣ ಪ್ರಶಸ್ತಿ’ ನೀಡಲಾಯಿತು. ಗೊಗೊಯಿ ಅವರ ಪತ್ನಿ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ADVERTISEMENT

ಅಸ್ಸಾಂನ ಸಾಮಾಜಿಕ ಕಾರ್ಯಕರ್ತೆ ಲಖಿಮಿ ಬರುವಾ, ಹರಿಯಾಣದ ಕುರುಕ್ಷೇತ್ರದ ಹಿಂದಿ ಸಾಹಿತಿ ಪ್ರಾಧ್ಯಾಪಕ ಜೈ ಭಗವಾನ್ ಗೋಯಲ್ ರಾಜಸ್ಥಾನದ ಮಂಗನಿಯಾರ್ ಜಾನಪದ ಗಾಯಕ ಲಾಖಾ ಖಾನ್, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ಬಾಂಬೆ ಜಯಶ್ರೀ ರಾಮನಾಥ್, ಡೆಹ್ರಾಡೂನ್ ಮೂಲದ ಹಿರಿಯ ಕೀಲು ಮತ್ತು ಮೂಳೆ ತಜ್ಞ ಭೂಪೇಂದ್ರ ಕುಮಾರ್ ಸಿಂಗ್ ಸಂಜ್ ಮತ್ತು ಶ್ರೀನಗರದ ಹಿರಿಯ ಹಿಂದಿ ಪ್ರಾಧ್ಯಾಪಕ ಮತ್ತು ಪತ್ರಕರ್ತ ಚಮನ್‌ ಲಾಲ್ ಸಪ್ರು ಅವರಿಗೆ ’ಪದ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜಸ್ಥಾನ ಮೂಲದ ಪಾಲಿ ಲೇಖಕ ಅರ್ಜುನ್ ಸಿಂಗ್ ಶೇಖಾವತ್, ಸಂಸ್ಕೃತ ವ್ಯಾಕರಣ ತಜ್ಞ ರಾಮ್ ಯತ್ನಾ ಶುಕ್ಲಾ, ದೆಹಲಿ ಮೂಲದ ಸಮಾಜ ಸೇವಕ ಜಿತೇಂದರ್ ಸಿಂಗ್ ಶುಂಟಿ, ಸ್ಟೀಪಲ್ ಚೇಸ್ ಅಥ್ಲೀಟ್ ಸುಧಾ ಸಿಂಗ್, ಬಿಹಾರದ ಹಿರಿಯ ಹಿಂದಿ ಲೇಖಕಿ ಮೃದುಲಾ ಸಿನ್ಹಾ (ಮರಣೋತ್ತರ), ಕೊಯಮತ್ತೂರಿನ ಗೇರ್ ಮ್ಯಾನ್ ಪಿ ಸುಬ್ರಮಣಿಯನ್( ಮರಣೋತ್ತರ), ಪಶ್ಚಿಮ ಬಂಗಾಳದ ಸಮಾಜ ಸೇವಕ ಗುರು ಮಾ ಕಮಲಿ ಸೊರೆನ್ ಮತ್ತು ಭೋಪಾಲ್‌ನ ಬುಡಕಟ್ಟು ಜಾನಪದ ಸಂಸ್ಕೃತಿ ವಿದ್ವಾಂಸ ಕಪಿಲ್ ತಿವಾರಿ ಅವರಿಗೆ ’ಪದ್ಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭಾರತದ ಪ್ರಮುಖ ಪ್ಯಾರಾ ಅಥ್ಲೀಟ್ ಕೆ. ವೈ.ವೆಂಕಟೇಶ್ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಕ್ವಾಜಿ ಸಜ್ಜದ್ ಅಲಿ ಜಹೀರ್ ಅವರಿಗೆ ’ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.