ADVERTISEMENT

ಕೋಲ್ಕತ್ತ ಆಸ್ಪತ್ರೆ ಮೇಲೆ ದಾಳಿ: 9 ಜನರ ಬಂಧನ

ಪಿಟಿಐ
Published 15 ಆಗಸ್ಟ್ 2024, 14:23 IST
Last Updated 15 ಆಗಸ್ಟ್ 2024, 14:23 IST
ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲೆ ಬುಧವಾರ ಮಧ್ಯರಾತ್ರಿಯ ಬಳಿಕ ದಾಳಿ ನಡೆಸಿದ ದುಷ್ಕರ್ಮಿಗಳು ವಿವಿಧ ವಾರ್ಡ್‌ಗಳನ್ನು ಧ್ವಂಸಗೊಳಿಸಿರುವುದು –ಪಿಟಿಐ ಚಿತ್ರ
ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲೆ ಬುಧವಾರ ಮಧ್ಯರಾತ್ರಿಯ ಬಳಿಕ ದಾಳಿ ನಡೆಸಿದ ದುಷ್ಕರ್ಮಿಗಳು ವಿವಿಧ ವಾರ್ಡ್‌ಗಳನ್ನು ಧ್ವಂಸಗೊಳಿಸಿರುವುದು –ಪಿಟಿಐ ಚಿತ್ರ   

ಕೋಲ್ಕತ್ತ: ಇಲ್ಲಿನ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣಕ್ಕೆ ಬುಧವಾರ ಮಧ್ಯರಾತ್ರಿಯ ಬಳಿಕ ನುಗ್ಗಿದ ದುಷ್ಕರ್ಮಿಗಳು, ಆಸ್ಪತ್ರೆಯ ಕಟ್ಟಡ, ವೈದ್ಯಕೀಯ ಯಂತ್ರೋಪಕರಣ, ಪೀಠೋಪಕರಣ, ಔಷಧ ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಧ್ವಂಸಗೊಳಿಸಿದರು.

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಸುಮಾರು 40 ಜನರ ಗುಂಪು ಪ್ರತಿಭಟನಕಾರರ ಸೋಗಿನಲ್ಲಿ ಏಕಾಏಕಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿದರು. ಅವರು ಆಸ್ಪತ್ರೆಯ ಕೌಂಟರ್‌ಗಳ ಗಾಜುಗಳನ್ನು ಪುಡಿಗಟ್ಟಿದರು. ತುರ್ತು ವಿಭಾಗ ಸೇರಿದಂತೆ ಕೆಲ ವಾರ್ಡ್‌ಗಳಿಗೆ ನುಗ್ಗಿ ಯಂತ್ರೋಪಕರಣಗಳಿಗೆ ಹಾನಿ ಮಾಡಿ, ಹಾಸಿಗೆಗಳನ್ನು ನಾಶಪಡಿಸಿದರು. ಔಷಧ ಕೇಂದ್ರ, ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿದರು, ಒಟ್ಟಾರೆ ಆಸ್ಪತ್ರೆಯ ಆಸ್ತಿಗೆ ಹಾನಿ ಮಾಡಿದರು.

ADVERTISEMENT

ಆಗಸ್ಟ್‌ 9ರಿಂದ ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಪ್ರತಿಭಟನಾ ಸ್ಥಳವನ್ನೂ ದುಷ್ಕರ್ಮಿಗಳು ನಾಶಮಾಡಿದರು. ಅಲ್ಲದೆ ಪೊಲೀಸರ ವಿರುದ್ಧ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಗುಂಪು ಚದುರಿಸಿದರು.

ಈ ಘಟನೆಯಲ್ಲಿ ಕೆಲ ಪೊಲೀಸರಿಗೆ ಗಾಯಗಳಾಗಿವೆ. ಪೊಲೀಸರ ಒಂದು ವಾಹನ ಮತ್ತು ಸ್ಥಳದಲ್ಲಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ವಿವರಿಸಿದರು.

ಕೋಲ್ಕತ್ತದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲೆ ಬುಧವಾರ ಮಧ್ಯರಾತ್ರಿಯ ಬಳಿಕ ದಾಳಿ ನಡೆಸಿದ ದುಷ್ಕರ್ಮಿಗಳು ವಿವಿಧ ವಾರ್ಡ್‌ಗಳನ್ನು ಧ್ವಂಸಗೊಳಿಸಿರುವುದು

ಟಿಎಂಸಿ ಗೂಂಡಾಗಳಿಂದ ಕೃತ್ಯ– ಬಿಜೆಪಿ ಆರೋಪ:

ಆಸ್ಪತ್ರೆ ಮೇಲಿನ ದಾಳಿಯನ್ನು ಖಂಡಿಸಿರುವ ಬಿಜೆಪಿ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ‘ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಕಳುಹಿಸಿದ ಟಿಎಂಸಿ ಗೂಂಡಾಗಳು ಈ ದುಷ್ಕೃತ್ಯ ಎಸಗಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

‘ಮಮತಾ ಅವರು ತಮ್ಮ ಈ ಕುತಂತ್ರ ಯೋಜನೆ ಜನರಿಗೆ ತಿಳಿಯುವುದಿಲ್ಲ ಎಂದು ಕೊಂಡಿದ್ದಾರೆ’ ಎಂದು ಅವರು ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ.

‘ಈ ದುಷ್ಕರ್ಮಿಗಳಿಗೆ ಪೊಲೀಸರೇ ಸುರಕ್ಷಿತ ಮಾರ್ಗವನ್ನು ಕಲ್ಪಿಸಿದ್ದಾರೆ. ಇದರಿಂದಾಗಿ ಅವರು ಆಸ್ಪತ್ರೆಯೊಳಗೆ ನುಗ್ಗಿ ಸಲಕರಣೆಗಳನ್ನು ನಾಶಪಡಿಸಿ, ಪರಾರಿಯಾಗಿದ್ದಾರೆ. ಈ ಮೂಲಕ ಸಿಬಿಐಗೆ ನಿರ್ಣಾಯಕ ಸಾಕ್ಷ್ಯಗಳು ದೊರೆಯದಂತೆ ಕೃತ್ಯ ಎಸಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. 

ದುಷ್ಕರ್ಮಿಗಳ ದಾಳಿಯಲ್ಲಿ ಧ್ವಂಸಗೊಳಿಸಿರುವ ತುರ್ತು ವಿಭಾಗದ ವಾರ್ಡ್‌ ಅನ್ನು ನೋವಿನಿಂದ ಗಮನಿಸಿದ ನರ್ಸ್‌  –ಎಎಫ್‌ಪಿ ಚಿತ್ರ
9 ಜನರ ಬಂಧನ:
ಈ ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಲಾಗಿದೆ. ಅಲ್ಲದೆ ಆಸ್ಪತ್ರೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ‘ರಿಕ್ಲೈಮ್‌ ದಿ ನೈಟ್‌’ ಹೆಸರಿನ ಅಭಿಯಾನವು ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಪ್ರಚಾರವಾಗಿದ್ದರಿಂದ ಹೆಚ್ಚಿನ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾತ್ರಿ 11.55ಕ್ಕೆ ಆರಂಭವಾದ ಈ ಅಭಿಯಾನ ಕೋಲ್ಕತ್ತದ ಪ್ರಮುಖ ಪ್ರದೇಶಗಳಲ್ಲಿ ಮತ್ತು ಇತರ ಪಟ್ಟಣಗಳಲ್ಲಿಯೂ ನಡೆಯಿತು. ಸ್ವಾತಂತ್ರ್ಯ ದಿನಾಚರಣೆ ಜತೆ ಈ ಅಭಿಯಾನವನ್ನು ಸಂಯೋಜಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.  ಪೊಲೀಸ್‌ ಆಯುಕ್ತ ವಿನೀತ್ ಗೋಯಲ್‌ ಅವರು ಗುರುವಾರ ನಸುಕಿನ 2 ಗಂಟೆಗೆ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು ‘ಈ ಪ್ರಕರಣ ಭೇದಿಸಲು ಪೊಲೀಸರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಕೆಲ ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಪ್ರಚಾರ ನಡೆಯುತ್ತಿದೆ. ಅದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ದುಷ್ಕರ್ಮಿಗಳ ದಾಳಿಯಲ್ಲಿ ನಾಶವಾಗಿರುವ ಔಷಧಿಗಳು –ಎಎಫ್‌ಪಿ ಚಿತ್ರ
ಪ್ರತಿಭಟನೆಯಲ್ಲಿ ನರ್ಸ್‌ಗಳು ಭಾಗಿ
ಆಸ್ಪತ್ರೆಯ ನರ್ಸಿಂಗ್‌ ಸ್ಟೇಷನ್‌ ಮೇಲೆ ದಾಳಿ ನಡೆದ ಕಾರಣ ನರ್ಸ್‌ಗಳು ಕಿರಿಯ ವೈದ್ಯರ ಜತೆ ಗುರುವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು. ವಾರದಿಂದ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದಾದ್ಯಂತ ವೈದ್ಯಕೀಯ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಕಳೆದ ವಾರ ಸ್ನಾತಕೋತ್ತರ ಪದವಿಯ ಟ್ರೈನಿ ವೈದ್ಯೆಯ (32) ಮೃತದೇಹ ಆಸ್ಪತ್ರೆಯ ಸೆಮಿನಾರ್‌ ಸಭಾಂಗಣದಲ್ಲಿ ಆಗಸ್ಟ್ 9ರ ಬೆಳಿಗ್ಗೆ ಪತ್ತೆಯಾಗಿತ್ತು. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಕೊಲೆಯಾಗಿದ್ದು ಕಲ್ಕತ್ತ ಹೈಕೋರ್ಟ್‌ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆಗಸ್ಟ್‌ 13ರಂದು ಆದೇಶಿಸಿದೆ.

ಕಠಿಣ ಕ್ರಮಕ್ಕೆ ಟಿಎಂಸಿ ಆಗ್ರಹ:

‘ಆಸ್ಪತ್ರೆಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಪ್ರತಿಯೊಬ್ಬರನ್ನು ಗುರುತಿಸಿ 24 ಗಂಟೆಯೊಳಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ’ ಟಿಎಂಸಿ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಅಭಿಷೇಕ್‌ ಬ್ಯಾನರ್ಜಿ ಆಗ್ರಹಿಸಿದ್ದಾರೆ. ‘ಯಾವುದೇ ರಾಜಕೀಯ ಹಿನ್ನೆಲೆಯವರು ಇದರಲ್ಲಿ ಭಾಗವಹಿಸಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. ವಕ್ತಾರನ ಸ್ಥಾನ ತೆರವು: ಆಸ್ಪತ್ರೆಯ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಗುರುವಾರ ರಾತ್ರಿಯೊಳಗೆ ಬಂಧಿಸಬೇಕು ಎಂದು ಆಗ್ರಹಿಸಿದ್ದ ಟಿಎಂಸಿ ನಾಯಕ ಪಕ್ಷದ ವಕ್ತಾರ ಸಂತಾನು ಸೇನ್‌ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ‘ಆರ್‌.ಜಿ.ಕರ್‌ ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್‌ ಘೋಷ್‌ ಅವರನ್ನು ಏಕೆ ರಕ್ಷಿಸಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದೂ ಸೇನ್‌ ಆಗ್ರಹಿಸಿದ್ದರು.

ಮಮತಾ ರಾಜೀನಾಮೆಗೆ ಆಗ್ರಹ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ರಾಜೀನಾಮೆಗೆ ಒತ್ತಾಯಿಸಿ ಶುಕ್ರವಾರ ಅವರ ಮನೆಯ ಮುಂದೆ ಮೋಂಬತ್ತಿ ಹಿಡಿದು ಪ್ರತಿಭಟನಾ ರ್‍ಯಾಲಿ ನಡೆಸಲು ಬಿಜೆಪಿ ಮಹಿಳಾ ಘಟಕ ನಿರ್ಧರಿಸಿದೆ. ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಹಾಗೂ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೇಲಿನ ದುಷ್ಕರ್ಮಿಗಳ ದಾಳಿಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ತಿಳಿಸಿದ್ದಾರೆ.  ‘ರಾಜ್ಯ ಸರ್ಕಾರಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಸೇನೆಯನ್ನು ಕರೆಸಿ ನಿಯಂತ್ರಿಸಲಿ. ಮೊದಲು ಮಮತಾ ಅವರು ರಾಜೀನಾಮೆ ನೀಡಲಿ’ ಎಂದು ಅವರು ಆಗ್ರಹಿಸಿದ್ದಾರೆ. ಟಿಎಂಸಿ ತಿರುಗೇಟು: ಈ ರೀತಿಯ ಘಟನೆಗಳು ನಡೆದಿರುವ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟಿದ್ದಾರೆಯೇ? ಇಲ್ಲವಲ್ಲ... ಎಂದು ಟಿಎಂಸಿ ಹಿರಿಯ ನಾಯಕ ಕುನಾಲ್‌ ಘೋಷ್‌ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.