ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿಯ ಕೊಲೆ ಕೃತ್ಯವನ್ನು ಖಂಡಿಸಿ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಸಾವಿರಾರು ಮಹಿಳೆಯರು ಬುಧವಾರ ನಡುರಾತ್ರಿಯಲ್ಲಿ ರಾಜ್ಯದಾದ್ಯಂತ ರಸ್ತೆಗಿಳಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಜಾಲತಾಣ ಬೆಂಬಲಿತ ಈ ಪ್ರತಿಭಟನೆ ರಾತ್ರಿ 11.55 ಗಂಟೆಗೆ ಶುರುವಾಯಿತು. ಸ್ವಾತಂತ್ರ್ಯೋತ್ಸವ ದಿನ ಸಂಭ್ರಮಾಚರಣೆ ಜೊತೆಗೆ ಪ್ರತಿಭಟನೆಯೂ ನಡೆಯಿತು.
ಸಣ್ಣ ಪಟ್ಟಣಗಳಿಂದ ದೊಡ್ಡ ನಗರದವರೆಗೂ ಅಲ್ಲಲ್ಲಿ ಗುಂಪುಗೂಡಿದ ಮಹಿಳೆಯರು, ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದ ಅತ್ಯಾಚಾರ ಮತ್ತು ಕೊಲೆಗೀಡಾದ ವಿದ್ಯಾರ್ಥಿಯ ಹತ್ಯೆ ಯತ್ನವನ್ನು ಖಂಡಿಸಿದರು.
‘ನಮಗೆ ನ್ಯಾಯ ಬೇಕು’ ಎಂಬ ಘೋಷಣೆ ಮುಗಿಲುಮುಟ್ಟಿತು. ಪ್ರತಿಭಟನೆಯ ವೇಳೆ ರಾಜಕೀಯ ಪಕ್ಷಗಳ ಬಾವುಟಗಳ ಬಳಕೆಗೆ ನಿರ್ಬಂಧ ಹೇರಲಾಗಿತ್ತು. ಎಲ್‌ಜಿಬಿಟಿಕ್ಯೂ ಸಮುದಾಯದವರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಸಂಯೋಜಕ ರಿಮ್‌ಜಿಮ್ ಸಿನ್ಹಾ, ‘ಮಹಿಳೆಯರ ಪರ ನಡೆದ ಪ್ರತಿಭಟನೆ ಸ್ವಾತಂತ್ರ್ಯದ ಹೊಸ ಹೋರಾಟ’ ಎಂದರು.
ವಿದ್ಯಾರ್ಥಿನಿಯರು, ವೃತ್ತಿಪರರು, ಗೃಹಿಣಿಯರು ಸೇರಿ ವಿವಿಧ ಕ್ಷೇತ್ರಗಳ ಮಹಿಳೆಯರು ಈ ಪ್ರತಿಭಟನೆಗೆ ಕೈಜೋಡಿಸಿದರು. ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಬೇಕು, ಆರೋಪಿಗೆ ಕಠಿಣ ಸಜೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.