ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ: ಆರು ಮಂದಿಗೆ ಸುಳ್ಳುಪತ್ತೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:56 IST
Last Updated 24 ಆಗಸ್ಟ್ 2024, 15:56 IST
<div class="paragraphs"><p>ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಕೋಲ್ಕತ್ತದಲ್ಲಿ ಶನಿವಾರ ಮಳೆಯ ನಡುವೆಯೇ ಪ್ರತಿಭಟನಾ ಮೆರವಣಿಗೆ ನಡೆಸಿದರು </p></div>

ವೈದ್ಯ ವಿದ್ಯಾರ್ಥಿನಿ ಕೊಲೆ ಖಂಡಿಸಿ ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಕೋಲ್ಕತ್ತದಲ್ಲಿ ಶನಿವಾರ ಮಳೆಯ ನಡುವೆಯೇ ಪ್ರತಿಭಟನಾ ಮೆರವಣಿಗೆ ನಡೆಸಿದರು

   

–ಪಿಟಿಐ ಚಿತ್ರ 

ನವದೆಹಲಿ/ ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಪ್ರಕರಣದ ಪ್ರಮುಖ ಆರೋಪಿ ಹಾಗೂ ಇತರ ಆರು ಮಂದಿಯ ಸುಳ್ಳು ಪತ್ತೆ ಪರೀಕ್ಷೆ ಪ್ರಕ್ರಿಯೆಯನ್ನು ಶನಿವಾರ ಆರಂಭಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಆತ ಬಂಧನದಲ್ಲಿರುವ ಜೈಲಿನಲ್ಲೇ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಸೇರಿದಂತೆ ಇತರ ಆರು ಮಂದಿಯನ್ನು ಕೋಲ್ಕತ್ತದ ಸಿಬಿಐ ಕಚೇರಿಯಲ್ಲಿ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. 

ಆಗಸ್ಟ್‌ 9ರಂದು (ಘಟನೆ ನಡೆದ ದಿನ) ರಾತ್ರಿ ಪಾಳಿಯಲ್ಲಿದ್ದ ವೈದ್ಯರು ಮತ್ತು ಇಬ್ಬರು ಮೊದಲ ವರ್ಷದ ಸ್ನಾತಕೋತ್ತರ ಟ್ರೈನಿಗಳು ಸುಳ್ಳುಪತ್ತೆ ಪರೀಕ್ಷೆಗೆ ಒಳಗಾದವರಲ್ಲಿ ಸೇರಿದ್ದಾರೆ. ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಸೆಮಿನಾರ್‌ ಹಾಲ್‌ನಲ್ಲಿ ಸ್ನಾತಕೋತ್ತರ ಟ್ರೈನಿಗಳ ಬೆರಳಚ್ಚು ಪತ್ತೆಯಾಗಿರುವುದು ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಕಾರಣ.

ಸುಳ್ಳುಪತ್ತೆ ಪರೀಕ್ಷೆ ನಡೆಸಲು ದೆಹಲಿಯ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲದ (ಸಿಎಫ್‌ಎಸ್‌ಎಲ್‌) ತಜ್ಞರ ತಂಡವು ಕೋಲ್ಕತ್ತಕ್ಕೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ತನಿಖೆ ಕೈಗೆತ್ತಿಕೊಂಡ ಸಿಬಿಐ: ಆರ್‌.ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರ ಆರೋಪಗಳ ಕುರಿತ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಎಫ್‌ಐಆರ್‌ ದಾಖಲಿಸುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಶನಿವಾರ ಎಸ್‌ಐಟಿಯಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಹಣಕಾಸು ಅವ್ಯವಹಾರದ ತನಿಖೆಯನ್ನು ಎಸ್‌ಐಟಿಯಿಂದ ಸಿಬಿಐಗೆ ವರ್ಗಾಯಿಸುವಂತೆ ಕಲ್ಕತ್ತ ಹೈಕೋರ್ಟ್ ಆದೇಶಿಸಿತ್ತು.

ಪ್ರಮುಖ ಅಂಶಗಳು
  • ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮುಷ್ಕರ ಸತತ 16ನೇ ದಿನಕ್ಕೆ ಕಾಲಿಟ್ಟಿದ್ದು ರೋಗಿಗಳು ಶನಿವಾರವೂ ಪರದಾಟ ನಡೆಸಿದರು.

  • ವೈದ್ಯ ವಿದ್ಯಾರ್ಥಿನಿ ಹತ್ಯೆ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡದ್ದಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆಯು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಮೂರು ಶಾಲೆಗಳಿಗೆ ನೋಟಿಸ್‌ ಜಾರಿಗೊಳಿಸಿದೆ.

  • ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮಾಡಿದ್ದು ಏಕೆ ಎಂಬ ಬಗ್ಗೆ 24 ಗಂಟೆಗಳ ಒಳಗಾಗಿ ಕಾರಣ ಕೊಡುವಂತೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.