ಕೋಲ್ಕತ್ತ: ಖ್ಯಾತ ಮಾಂತ್ರಿಕ ಹ್ಯಾರಿ ಹೌಡಿನಿಯವರ ಅಪ್ರತ್ಯಕ್ಷವಾಗುವ ಮ್ಯಾಜಿಕ್ ಅನುಕರಣೆ ಮಾಡಲು ಹೋಗಿ ಚಂಚಲ್ ಲಾಹಿರಿ ಎಂಬ ಮಾಂತ್ರಿಕ ಹೂಗ್ಲೀ ನದಿಯಲ್ಲಿ ಮುಳುಗಿದ ಘಟನೆ ವರದಿಯಾಗಿದೆ.
ಕೋಲ್ಕತ್ತ ನಿವಾಸಿ 41ರ ಹರೆಯದ ಚಂಚಲ್ ಲಾಹಿರಿ ಮಾಂಡ್ರೇಕ್ ಎಂದೇ ಕರೆಯಲ್ಪಡುತ್ತಾರೆ. ಅಂಡರ್ ವಾಟರ್ ಎಸ್ಕೇಪ್ (ನೀರಿನಡಿಯಲ್ಲಿ ಮುಳುಗಿ ಮಾಡುವ ಸ್ಟಂಟ್ ) ಮಾಡಲು ಹೋಗಿ ಲಾಹಿರಿ ಶನಿವಾರಕಾಣೆಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಲಾಹಿರಿ ಮಿಲೇನಿಯಂ ಪಾರ್ಕ್‌ನಿಂದ ನದಿಯೊಳಗೆ ಮುಳುಗಿದ್ದರು.ಆದರೆ ಹೌರಾ ಸೇತುವೆಯ 28ನೇ ಕಂಬದ ಬಳಿ ಕಾಣೆಯಾಗಿದ್ದಾರೆ. ವಿಪತ್ತು ನಿರ್ವಹಣಾ ತಂಡ ಮತ್ತು ಪೊಲೀಸರು ಲಾಹಿರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ನಾವು ಲಾಹಿರಿಯ ಹುಡುಕಾಟ ನಡೆಸಿದ್ದು, ಅಲೆಯಲ್ಲಿ ಅವರು ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ.ಮುಳುಗುತಜ್ಞರು ಬಂದು ಹುಡುಕಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.ಕತ್ತಲೆಯಾದ ಕಾರಣ ನಾವು ಭಾನುವಾರ ಸಂಜೆ ಹುಡುಕಾಟವನ್ನು ನಿಲ್ಲಿಸಿದ್ದೆವು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಸ್ಟಂಟ್ ಮಾಡುವುದಕ್ಕಾಗಿ ಲಾಹಿರಿ ಪೊಲೀಸರ ಅನುಮತಿ ಪಡೆದಿದ್ದರೂ, ಸರಿಯಾದ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಫೈರೀ ಪ್ಲೇಸ್ ಘಾಟ್‌ನಿಂದ ದೋಣಿ ಮೂಲಕ ಸಾಗಿದ ಲಾಹಿರಿ ಹೂಗ್ಲೀನದಿಯಲ್ಲಿ ಸ್ಟಂಟ್ ಮಾಡಿದ್ದರು.ಅವರು ಮಾಡುತ್ತಿರುವಜಾದೂ ತುಂಬಾ ಅಪಾಯಕಾರಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರುಹೇಳಿದ್ದಾರೆ.
ಲಾಹಿರಿಯ ಕಣ್ಣಿಗೆ ಪಟ್ಟಿ ಕಟ್ಟಿದ್ದಲ್ಲದೆ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ ಗಾಜಿನ ಬಾಕ್ಸ್‌ನೊಳಗೆ ಬಂಧಿಯಾಗಿ ನೀರಿಗೆ ಇಳಿಸಲಾಗಿತ್ತು.ಹೀಗೆ ನೀರಿನೊಳಗೆ ಹೋದ ನಂತರ ಕೈ ಕಾಲುಗಳನ್ನು ಹಗ್ಗದಿಂದ ಬಿಡಿಸಿ ಎದ್ದು ಬರುವ ಸ್ಟಂಟ್ ಅದಾಗಿತ್ತು.ಆದರೆ 10 ನಿಮಿಷವಾದರೂ ಅವರು ನೀರಿನಿಂದ ಮೇಲೇಳದಿದ್ದಾಗ ಭಯಗೊಂಡ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.