ನವದೆಹಲಿ: ಕೋಲ್ಕತ್ತದಲ್ಲಿ ಇತ್ತೀಚೆಗೆ ತರಬೇತಿ ನಿರತ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವಾಸಿ ವೈದ್ಯರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮುಖ ಸೇವೆಗಳು ಮಂಗಳವಾರವೂ ಸ್ಥಗಿತಗೊಂಡಿವೆ.
ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ವಿರೋಧಿಸಿ ದೇಶದಾದ್ಯಂತ ಸರ್ಕಾರಿ ಆಸ್ಪತ್ರೆಗಳ ನಿವಾಸಿ ವೈದ್ಯರು ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದರು, ಒಪಿಡಿ (ಹೊರರೋಗಿ ವಿಭಾಗಗಳು) ಮತ್ತು ತುರ್ತು ರಹಿತ ಶಸ್ತ್ರಚಿಕಿತ್ಸೆಯಂತಹ ಸೇವೆಗಳನ್ನು ಸ್ಥಗಿತಗೊಳಿಸಿದ್ದರು.
‘ನ್ಯಾಯ ಸಿಗುವವರೆಗೆ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಮುಷ್ಕರ ಕೈಬಿಡುವುದಿಲ್ಲ’ಎಂದು ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಎಫ್‌ಒಆರ್‌ಡಿಎ) ನೀಡಿದ ಕರೆಗೆ ಸ್ಪಂದಿಸಿ ಧರಣಿ ನಡೆಸಲಾಯಿತು.
ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಯಾವುದೇ ನಿರ್ಣಯ ಹೊರಬರದ ಕಾರಣ ಸಂಘಟನೆಯು ತನ್ನ ಅನಿರ್ದಿಷ್ಟಾವಧಿ ಮುಷ್ಕರವನ್ನು ವಿಸ್ತರಿಸುವುದಾಗಿ ಸೋಮವಾರ ಘೋಷಿಸಿತ್ತು.
ಮಂಗಳವಾರವೂ ಮುಷ್ಕರ ಮುಂದುವರಿಯಲಿದೆ ಎಂದು ಫೋರ್ಡಾ ಅಧ್ಯಕ್ಷ ಅವಿರಾಲ್ ಮಾಥುರ್ ಸಭೆಯ ನಂತರ ಘೋಷಿಸಿದರು.
‘ನಾನು, ಸಂಘದ ಸದಸ್ಯರು ಮತ್ತು ವೈದ್ಯರು ಸೋಮವಾರ ಕೇಂದ್ರ ಆರೋಗ್ಯ ಸಚಿವರ ತಂಡವನ್ನು ಭೇಟಿ ಮಾಡಿದ್ದೇವು. ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ತೀರ್ಮಾನಕ್ಕೆ ಬರದ ಕಾರಣ, ಮುಷ್ಕರವು ಇನ್ನೊಂದು ದಿನ ಮುಂದುವರಿಸುತ್ತಿದ್ದೇವೆ’ ಎಂದು ಸಂಘದ ಅಧ್ಯಕ್ಷ ಅವಿರಾಲ್ ಮಾಥುರ್ ಹೇಳಿದ್ದಾರೆ.
ತುರ್ತು ಸೇವೆಗಳು ಮುಂದುವರಿಯಲಿವೆ ಎಂದೂ ಅವರು ಸ್ಪಷ್ಟಪಡಿಸಿದ್ಧಾರೆ.
ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ತಂಡವು ಸಹ ಆರ್.ಜೆ. ಕರ್ ಆಸ್ಪತ್ರೆಗೆ ಭೇಟಿ ನೀಡಿದೆ.
ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಪೊಲೀಸರು ಭಾನುವಾರದೊಳಗೆ ಭೇದಿಸದಿದ್ದರೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಿ, ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ‘ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು ಮತ್ತು ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆಯಾಗಬೇಕು‘ ಎಂದು ಹೇಳಿದರು.
‘ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು. ಈ ಕಾರ್ಯವನ್ನು ಅವರು ಭಾನುವಾರದೊಳಗೆ ಮಾಡದಿದ್ದರೆ, ಪ್ರಕರಣವನ್ನು ಸಿಬಿಐಗೆ ವಹಿಸುತ್ತೇನೆ. ಸಿಬಿಐನ ಯಶಸ್ಸಿನ ಪ್ರಮಾಣವೂ ಕಡಿಮೆ ಇದೆ ಎಂಬುದು ಗೊತ್ತಿದೆ. ಅದು ಪ್ರತಿಷ್ಠಿತ ವ್ಯಕ್ತಿಗಳ ಪ್ರಕರಣಗಳನ್ನೇ ಬೇಧಿಸಿಲ್ಲ. ಹೀಗಿದ್ದರೂ, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನನಗೆ ಯಾವುದೇ ಅಭ್ಯಂತರವಿಲ್ಲ’ ಎಂದು ಉತ್ತರಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.