ಕೋಲ್ಕತ್ತ: ಪಶ್ಚಿಮ ಬಂಗಾಳ ಬಂದ್ ವೇಳೆ ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಕೆಲವಡೆ ಘರ್ಷಣೆಯಾಗಿದೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ಕಾರ್ಯಕರ್ತರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
'ಭತ್ಪಾರದಲ್ಲಿ ನಮ್ಮ ಪಕ್ಷದ ನಾಯಕ ಪ್ರಿಯಾಂಗು ಪಾಂಡೆ ಅವರ ಹತ್ಯೆ ಯತ್ನ ನಡೆದಿದೆ. ಅವರ ಕಾರಿನ ಮೇಲೆ 7 ಸುತ್ತಿನ ಗುಂಡಿನ ದಾಳಿ ನಡೆಸಲಾಗಿದೆ. ಡ್ರೈವರ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ' ಎಂದು ಬಿಜೆಪಿ ನಾಯಕ ಅರುಣ್ ಸಿಂಗ್ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ಹಂಚಿಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಈ ರೀತಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಹಾಗೆಯೇ, ಜನರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಬಂದ್ ಯಶಸ್ವಿಯಾಗಿದೆ ಎಂದೂ ಹೇಳಿಕೊಂಡಿದ್ದಾರೆ.
ಕೋಲ್ಕತ್ತದ ಮುನ್ಷಿ ಬಜಾರ್ ಪ್ರದೇಶದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ನಡೆದ 'ನಬನ್ನಾ ಅಭಿಯಾನ್' ಪ್ರತಿಭಟನಾ ರ‍್ಯಾಲಿ ವೇಳೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಇಂದು 'ಬಂಗಾಳ ಬಂದ್'ಗೆ ಕರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.