ADVERTISEMENT

ವಿದ್ಯಾರ್ಥಿನಿ ಹತ್ಯೆ: ವ್ಯವಸ್ಥೆಯ ವೈಫಲ್ಯ ವೈದ್ಯರ ಸುರಕ್ಷತೆಗೆ ಸವಾಲಾಗಿದೆ: SC

ಪಿಟಿಐ
Published 20 ಆಗಸ್ಟ್ 2024, 6:53 IST
Last Updated 20 ಆಗಸ್ಟ್ 2024, 6:53 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ವ್ಯವಸ್ಥೆಯ ವೈಫಲ್ಯ ದೇಶದಾದ್ಯಂತ ವೈದ್ಯರ ಸುರಕ್ಷತೆಗೆ ಸವಾಲಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ಮಹಿಳೆಯರು ಕೆಲಸಕ್ಕೆ ತೆರಳಲು ಸಾಧ್ಯವಾಗದಿದ್ದರೆ ಅಥವಾ ಕೆಲಸದ ಸ್ಥಳದಲ್ಲಿ ಸುರಕ್ಷತೆ ಇಲ್ಲದಿದ್ದರೆ, ನಾವು ಅವರನ್ನು ಸಮಾನವಾಗಿ ಕಾಣುತ್ತಿಲ್ಲ ಎನ್ನುವ ಅರ್ಥ ಮೂಡುತ್ತದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ನೇತೃತ್ವದ, ಜೆ.ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ.

‘ಪಶ್ಚಿಮ ಬಂಗಾಳ ಸರ್ಕಾರ ತನ್ನ ಅಧಿಕಾರವನ್ನು  ಪ್ರತಿಭಟನಕಾರರ ಮೇಲೆ ತೋರಿಸುವುದು ತರವಲ್ಲ, ದೇಶದಲ್ಲಿ ಭಯ, ಆತಂಕವನ್ನು ತೊಡೆದು ಹಾಕುವ ಸಮಯ ಇದಾಗಿದೆ. ದೇಶವು ಇನ್ನೊಂದು ಅತ್ಯಾಚಾರವನ್ನು ಬಯಸುವುದಿಲ್ಲ’ ಎಂದ ಕೋರ್ಟ್‌, ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಮತ್ತು ಆರ್‌. ಜಿ ಕರ್ ಆಸ್ಪತ್ರೆ ಮೇಲಿನ ಗುಂಪು ದಾಳಿ ತನಿಖೆಯ ಪ್ರಗತಿಯ ಕುರಿತು ಆ.22 ರೊಳಗೆ ತನಿಖೆಯ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳಕ್ಕೆ ನಿರ್ದೇಶನ ನೀಡಿದೆ.

ADVERTISEMENT

ಇದೇ ವೇಳೆ, ವೈದ್ಯರ ಸುರಕ್ಷತೆ, ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಪ್ರೋಟೋಕಾಲ್ ಅನ್ನು ರೂಪಿಸಲು 10 ಸದಸ್ಯರಿರುವ ಕಾರ್ಯಪಡೆಯನ್ನು ರಚಿಸುವಂತೆ ಕೋರ್ಟ್‌ ಆದೇಶಿಸಿದೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿ ಕಲ್ಕತ್ತ ಹೈಕೋರ್ಟ್‌ ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಹೀಗಿದ್ದೂ ಇತರ ವೈದ್ಯರ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಸಿಬಿಐ ತಪ್ಪಿತಸ್ಥರನ್ನು ಬಂಧಿಸಬೇಕು ಮತ್ತು ನ್ಯಾಯಾಲಯವು ಅವರಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕು ಎಂದು ಪ್ರತಿಭಟನನಿರತ ವೈದ್ಯರ  ಒತ್ತಾಯವಾಗಿದೆ. ಜೊತೆಗ ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.