ADVERTISEMENT

ವೈದ್ಯೆಯ ಅತ್ಯಾಚಾರ, ಕೊಲೆ: ಪಶ್ಚಿಮ ಬಂಗಾಳ ಸರ್ಕಾರ, ಪೊಲೀಸರಿಗೆ ‘ಸುಪ್ರೀಂ’ ತರಾಟೆ

ಪಿಟಿಐ
Published 20 ಆಗಸ್ಟ್ 2024, 11:53 IST
Last Updated 20 ಆಗಸ್ಟ್ 2024, 11:53 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಕೋಲ್ಕತ್ತದ ಸರ್ಕಾರಿ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಭಯಾನಕ ಎಂದಿರುವ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಎಫ್‌ಐಅರ್‌ ದಾಖಲಿಸಲು ವಿಳಂಬ ಕುರಿತಂತೆಯೂ ಪ್ರಶ್ನಿಸಿದೆ.

ದೇಶದಾದ್ಯಂತ ವೈದ್ಯರ ರಕ್ಷಣೆ ಕುರಿತಾದ ವ್ಯವಸ್ಥೆಯ ಲೋಪವನ್ನು ಪ್ರಕರಣ ಎತ್ತಿ ತೋರಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ADVERTISEMENT

ಪ್ರಕರಣ ಕುರಿತಂತೆ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ಒಂದು ಪಕ್ಷ ಮಹಿಳೆಯರು ಉದ್ಯೋಗಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಕೆಲಸದ ಸ್ಥಳವು ಸುರಕ್ಷಿತವಲ್ಲದಿದ್ದರೆ ಅವರಿಗೆ ಸಮಾನತೆ ನಿರಾಕರಿಸಿದಂತೆ ಎಂದು ಹೇಳಿದೆ.

ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ವಿಳಂಬ ಕುರಿತಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಆಸ್ಪತ್ರೆಯ ಆಡಳಿತ ಮಂಡಳಿ ಏನು ಮಾಡುತ್ತಿತ್ತು? ಎಂದು ಪ್ರಶ್ನಿಸಿದೆ.

‘ಕೃತ್ಯ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಇದೊಂದು ಆತ್ಮಹತ್ಯೆ ಎಂದು ಬಿಂಬಿಸಲು ಕಾಲೇಜಿನ ಪ್ರಾಂಶುಪಾಲರು ಪ್ರಯತ್ನಿಸಿದ್ದಾರೆ’ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ಕೋಲ್ಕತ್ತ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೊರ್ಟ್, ಸಾವಿರಾರು ಸಂಖ್ಯೆಯ ಜನರ ಗುಂಪು ಆರ್‌.ಜಿ. ಕರ್ ಮೆಡಿಕಲ್ ಕಾಲೇಜಿಗೆ ಹೇಗೆ ಪ್ರವೇಶಿಸಿತು ಎಂದು ಪ್ರಶ್ನಿಸಿದೆ.

ಮೆಡಿಕಲ್ ಕಾಲೇಜು ಪ್ರಾಂಶುಪಾಲರು ವಿಚಾರಣೆ ಎದುರಿಸುತ್ತಿರುವಾಗ ಅವರನ್ನು ಕೂಡಲೇ ಬೇರೆ ಕಾಲೇಜಿಗೆ ನೇಮಕ ಮಾಡಿದ್ದು ಹೇಗೆ? ಎಂದು ಪ್ರಶ್ನೆ ಹಾಕಿದೆ.

ಆಸ್ಪತ್ರೆಗಳಲ್ಲಿ ಯುವ ವೈದ್ಯರನ್ನು 36 ಗಂಟೆಗಳ ಕಾಲ ಕೆಲಸದಲ್ಲಿ ತೊಡಗಿಸಲಾಗುತ್ತಿದೆ. ಕೆಲಸದ ಸ್ಥಳವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರೋಟೊಕಾಲ್‌ನಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಪೀಠ ಹೇಳಿದೆ.

ಇದೇವೇಳೆ, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠಕ್ಕೆ ತಿಳಿಸಿದ್ದಾರೆ.

ಕೋಲ್ಕತ್ತ ಪೊಲೀಸರ ಗಮನಕ್ಕೆ ಬಾರದೆ 7,000 ಮಂದಿಯ ಗುಂಪು ಆಸ್ಪತ್ರೆಗೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.