ADVERTISEMENT

ಕೋಲ್ಕತ್ತ ಅತ್ಯಾಚಾರ ಪ್ರಕರಣ: ಬಂಗಾಳ ಸರ್ಕಾರದ ನಿಧಾನಗತಿಗೆ ಕೋರ್ಟ್‌ ಅತೃಪ್ತಿ

ಪಿಟಿಐ
Published 30 ಸೆಪ್ಟೆಂಬರ್ 2024, 16:20 IST
Last Updated 30 ಸೆಪ್ಟೆಂಬರ್ 2024, 16:20 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವೈದ್ಯಕೀಯ ಸೌಲಭ್ಯಗಳು ಲಭ್ಯವಿರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ, ಪ್ರತ್ಯೇಕ ಶೌಚಾಲಯ ಮತ್ತು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸುವ ವಿಚಾರದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅತೃಪ್ತಿ ವ್ಯಕ್ತಪಡಿಸಿದೆ. ಈಗ ನಡೆಯುತ್ತಿರುವ ಕೆಲಸಗಳನ್ನು ಅಕ್ಟೋಬರ್ 15ಕ್ಕೆ ಮೊದಲು ಪೂರ್ಣಗೊಳಿಸಬೇಕು ಎಂದು ಅದು ಸರ್ಕಾರಕ್ಕೆ ಸೂಚನೆ ನೀಡಿದೆ.

ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಆಕೆಯ ಹತ್ಯೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ.

ಹತ್ಯೆಗೀಡಾದ ವಿದ್ಯಾರ್ಥಿನಿಯ ಭಾವಚಿತ್ರ ಮತ್ತು ಆಕೆಯ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮತ್ತೆ ಹಂಚಿಕೊಳ್ಳುತ್ತಿರುವುದನ್ನು ಕಂಡು ಆಕೆಯ ತಂದೆ–ತಾಯಿ ವಿಚಲಿತರಾಗಿದ್ದಾರೆ ಎಂದು ವಕೀಲೆ ವೃಂದಾ ಗ್ರೋವರ್ ಅವರು ಪೀಠಕ್ಕೆ ತಿಳಿಸಿದರು.

ADVERTISEMENT

ಈ ವಿಚಾರವಾಗಿ ಈಗಾಗಲೇ ಆದೇಶವೊಂದನ್ನು ಹೊರಡಿಸಲಾಗಿದೆ, ಕಾನೂನು ಜಾರಿ ಸಂಸ್ಥೆಗಳು ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಪೀಠವು ಸ್ಪಷ್ಟಪಡಿಸಿತು. 

ಸಿಬಿಐ ಅಧಿಕಾರಿಗಳು ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಹಾಗೂ ಹಣಕಾಸಿನ ಅಕ್ರಮಗಳ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಪೀಠವು ಹೇಳಿತು.

ಹಣಕಾಸಿನ ಅಕ್ರಮಗಳನ್ನು ನಡೆಸಿದ ಆರೋಪ ಎದುರಿಸುತ್ತಿದ್ದರೂ ಈಗಲೂ ಆರ್.ಜಿ. ಕರ್ ಆಸ್ಪತ್ರೆಯ ನೌಕರರಾಗಿ ಮುಂದುವರಿದಿರುವವರು ಯಾರು ಎಂಬ ಮಾಹಿತಿಯನ್ನು ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಂದ ಬಯಸಿತು. ಅಂಥವರ ಹೆಸರನ್ನು ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರದ ಜೊತೆ ಹಂಚಿಕೊಳ್ಳಬೇಕು ಎಂದು ಸೂಚಿಸಿತು. ವಿಚಾರಣೆಯನ್ನು ಪೀಠವು ಅಕ್ಟೋಬರ್ 14ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.