ADVERTISEMENT

ಕೋಲ್ಕತ್ತದಲ್ಲಿ ಹಿಜಾಬ್‌ ವಿವಾದ: ರಾಜೀನಾಮೆ ನೀಡಿದ ಕಾನೂನು ಕಾಲೇಜಿನ ಅಧ್ಯಾಪಕಿ

ಪಿಟಿಐ
Published 11 ಜೂನ್ 2024, 16:07 IST
Last Updated 11 ಜೂನ್ 2024, 16:07 IST
<div class="paragraphs"><p>ಹಿಜಾಬ್‌ ( ಸಾಂದರ್ಭಿಕ ಚಿತ್ರ )</p></div>

ಹಿಜಾಬ್‌ ( ಸಾಂದರ್ಭಿಕ ಚಿತ್ರ )

   

ಕೋಲ್ಕತ್ತ: ಇಲ್ಲಿನ ಎಲ್‌ಜೆಡಿ ಖಾಸಗಿ ಕಾನೂನು ಕಾಲೇಜಿನ ಅಧ್ಯಾಪಕಿಯೊಬ್ಬರಿಗೆ ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸದಂತೆ ಸಂಸ್ಥೆಯ ಅಧಿಕಾರಿಗಳು ಸೂಚಿಸಿದ್ದರಿಂದ, ಅಧ್ಯಾಪಕಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆದರೆ, ಈ ವಿಷಯ ಸಾರ್ವಜನಿಕವಾಗಿ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿಯ ಅಧಿಕಾರಿಗಳು ‘ಈ ಬೆಳವಣಿಗೆಯು ತಪ್ಪು ಸಂವಹನದಿಂದ ಉಂಟಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅಧ್ಯಾಪಕಿ ರಾಜೀನಾಮೆ ಹಿಂಪಡೆದು ತರಗತಿಗೆ ಹಾಜರಾಗಲಿದ್ದಾರೆ ಎಂದೂ ಹೇಳಿದ್ದಾರೆ.

ADVERTISEMENT

ಕಳೆದ ಮೂರು ವರ್ಷಗಳಿಂದ ಕಾನೂನು ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಜಿದಾ ಖಾದರ್ ಅವರು, ಮೇ 31ರ ನಂತರ ಕೆಲಸದ ಸ್ಥಳದಲ್ಲಿ ಹಿಜಾಬ್ ಧರಿಸದಂತೆ ಕಾಲೇಜು ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿ ಜೂನ್ 5ರಂದು ರಾಜೀನಾಮೆ ನೀಡಿದ್ದರು.

‘ಕಾಲೇಜು ಆಡಳಿತ ಮಂಡಳಿಯ ಆದೇಶವು ನಾನು ನಂಬಿದ ಮೌಲ್ಯಗಳು ಮತ್ತು ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ’ ಎಂದು ಸಂಜಿದಾ ಹೇಳಿದ್ದಾರೆ. 

ಸಂಜಿದಾ ಅವರು ಕೆಲಸದ ಸ್ಥಳದಲ್ಲಿ ಮಾರ್ಚ್-ಏಪ್ರಿಲ್‌ನಿಂದ ಸ್ಕಾರ್ಫ್ ಧರಿಸುತ್ತಿದ್ದರು. ಕಳೆದ ವಾರದಿಂದ ಈ ವಿಷಯ ವಿವಾದಕ್ಕೆ ತಿರುಗಿದಂತೆ ತೋರುತ್ತಿದೆ. ಆದಾಗ್ಯೂ ಅವರ ರಾಜೀನಾಮೆ ವಿಷಯ ಬಹಿರಂಗಗೊಂಡ ನಂತರ, ಕಾಲೇಜು ಅಧಿಕಾರಿಗಳು ಸಂಜಿದಾ ಅವರನ್ನು ಸಂಪರ್ಕಿಸಿ, ‘ಇದು ಕೇವಲ ತಪ್ಪು ಸಂವಹನದಿಂದ ಆಗಿದೆ’ ಎಂದು ಮನವರಿಕೆ ಮಾಡಿ, ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದರು. ಅಲ್ಲದೆ, ಕೆಲಸದ ಸ್ಥಳದಲ್ಲಿ ಬಟ್ಟೆಯಿಂದ ತಲೆ ಮುಚ್ಚಿಕೊಳ್ಳುವುದನ್ನು ನಾವು ಎಂದಿಗೂ ನಿಷೇಧಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಅಧ್ಯಾಪಕಿಗೆ ಬೆಂಬಲ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳದ ಸಚಿವ ಮತ್ತು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಸಿದ್ದಿಕುಲ್ಲಾ ಚೌಧರಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಅಧ್ಯಾಪಕಿಯ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. 

ಕಾಲೇಜು ಆಡಳಿತ ಮಂಡಳಿ ಅಧಿಕಾರಿಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಹಿರಿಯ ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.