ADVERTISEMENT

ಕೋಲ್ಕತ್ತ ಪ್ರಕರಣ: ಆರೋಪಿ ಓಡಿಸಿದ್ದು ಪೊಲೀಸ್ ಆಯುಕ್ತರ ಹೆಸರಿನಲ್ಲಿದ್ದ ಬೈಕ್–BJP

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2024, 15:52 IST
Last Updated 27 ಆಗಸ್ಟ್ 2024, 15:52 IST
<div class="paragraphs"><p>ಸಂಜಯ್ ರಾಯ್</p></div>

ಸಂಜಯ್ ರಾಯ್

   

ಎಕ್ಸ್ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿರುವ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌, ಕೃತ್ಯಕ್ಕೂ ಮೊದಲು ಹಾಗೂ ನಂತರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನೋಂದಾಯಿಸಲಾಗಿದ್ದ ಬೈಕ್ ಚಾಲನೆ ಮಾಡಿದ್ದ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

ಈ ಕುರಿತಂತೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಪ್ರಕರಣವನ್ನು ಆತ್ಮಹತ್ಯೆ ಎಂದು ಹೇಳಿದ್ದ ಕೋಲ್ಕತ್ತದ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನೋಂದಾಯಿಸಲಾಗಿದ್ದ ಬೈಕ್‌ನಲ್ಲಿ ಪ್ರಮುಖ ಆರೋಪಿ ಓಡಾಡಿದ್ದಾನೆ. ಮುಖ್ಯಮಂತ್ರಿ ಮಮತಾ ಬ್ಯಾಜನರ್ಜಿ ಅವರು ಆಯುಕ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಹೀಗಾಗಿ ಈ ಇಬ್ಬರು ತಕ್ಷಣವೇ ತಮ್ಮ ಹುದ್ದೆಗಳಿಂದ ಕೆಳಕ್ಕಿಳಿಯಬೇಕು’ ಎಂದು ಒತ್ತಾಯಿಸಿದ್ದಾರೆ.

‘ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಇವರನ್ನು ಕೂಡಲೇ ವಶಕ್ಕೆ ಪಡೆಯಬೇಕು. ಇವರ ಫೋನ್ ಕರೆಗಳ ದಾಖಲೆಗಳನ್ನು ಪರಿಶೀಲಿಸಬೇಕು. ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ನಕಲಿ ಔಷಧ ಜಾಲವನ್ನು ಮೃತ ವೈದ್ಯೆ ಪತ್ತೆ ಮಾಡಿದ್ದರೇ? ಶ್ವಾಸಕೋಶ ತಜ್ಞೆಯಾಗಿದ್ದ ಮೃತ ವೈದ್ಯೆಯ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಷಯ ರೋಗದ ಔಷಧಗಳು ಬರುತ್ತಿದ್ದವು. ತೆರಿಗೆದಾತರ ಈ ಹಣದಲ್ಲಿ ನಕಲಿ ಔಷಧಗಳನ್ನು ಖರೀದಿಸಲಾಗಿತ್ತೇ? ಇಂಥ ಎಲ್ಲಾ ಸಂಗತಿಗಳ ಕುರಿತು ಸಿಬಿಐ ತನಿಖೆ ನಡೆಸಬೇಕಿದೆ. ಈವರೆಗೂ ಪ್ರಕರಣದ ಪ್ರಮುಖ ಸಾಕ್ಷ್ಯಗಳ ನಾಶಕ್ಕೆ ಏನೆಲ್ಲಾ ಮಾಡಬೇಕೋ ಅಷ್ಟನ್ನೂ ಮುಖ್ಯಮಂತ್ರಿ ಹಾಗೂ ಪೊಲೀಸ್ ಆಯುಕ್ತರು ಮಾಡಿದ್ದಾರೆ. ಆ ಮೂಲಕ ಕೃತ್ಯದಲ್ಲಿ ಭಾಗಿಯಾದವರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ಪೊಲೀಸ್ ಇಲಾಖೆ ಸ್ಪಷ್ಟನೆ

ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ ರಾಯ್‌ ಓಡಿಸಿದ್ದ ಬೈಕ್ ಪೊಲೀಸ್ ಆಯುಕ್ತರಿಗೆ ಸೇರಿದ್ದು ಎಂದು ಹಲವರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಕೋಲ್ಕತ್ತ ಪೊಲೀಸ್ ಇಲಾಖೆಗೆ ಖರೀದಿಸುವ ಎಲ್ಲಾ ಸರ್ಕಾರಿ ವಾಹನಗಳು, ಅವುಗಳ ನಿಯೋಜನೆಗೂ ಪೂರ್ವದಲ್ಲಿ ಪೊಲೀಸ್ ಆಯುಕ್ತರ ಹೆಸರಿನಲ್ಲೇ ನೋಂದಣಿಯಾಗುತ್ತವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಕೋಲ್ಕತ್ತ  ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಕೋಲ್ಕತ್ತ ಪೊಲೀಸ್‌ ಇಲಾಖೆಯಲ್ಲಿ ಸ್ವಯಂಸೇವಕ ನಾಗರಿಕನಂತೆ ಆರೋಪಿ ಸಂಜಯ್ ರಾಯ್ ಕೆಲಸ ಮಾಡುತ್ತಿದ್ದ ಎಂದೆನ್ನಲಾಗಿದೆ. 

2ನೇ ಬಾರಿ ಘೋಷ್ ಸುಳ್ಳು ಪತ್ತೆ ಪರೀಕ್ಷೆ 

ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಅವರನ್ನು ಸಿಬಿಐ ಎರಡನೇ ಬಾರಿಗೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿತು. ಪರೀಕ್ಷೆಯನ್ನು ಕೇಂದ್ರೀಯ ವಿಧಿ ವಿಜ್ಞಾನಗಳ ಪ್ರಯೋಗಾಲಯದ ತಜ್ಞರು ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.