ಕೋಲ್ಕತ್ತ: ಕೋಲ್ಕತ್ತದ ಕೇಂದ್ರ ಸ್ಥಾನ ಪಾರ್ಕ್ ಸರ್ಕಸ್ ಪ್ರದೇಶದಲ್ಲಿರುವ ಬಾಂಗ್ಲಾದೇಶ ಡೆಪ್ಯೂಟಿ ಹೈಕಮಿಷನ್ ಕಚೇರಿಯ ಹೊರಗೆ ಗುಂಡಿನ ದಾಳಿ ನಡೆದಿದೆ. ಓರ್ವ ಮಹಿಳೆ ಮೃತಪಟ್ಟಿದ್ದಾರೆ. ದಾಳಿಕೋರನು ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ದಾಳಿಕೋರ ಪೊಲೀಸ್ ಸಿಬ್ಬಂದಿಯೆಂದು ತಿಳಿದುಬಂದಿದೆ. ದಾಳಿಗೆ ಕಾರಣವೇನು ಎಂದು ತಿಳಿದುಬಂದಿಲ್ಲ.
ಪೊಲೀಸ್ ಸಿಬ್ಬಂದಿ ಹಾರಿಸಿದ ಗುಂಡು ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಮಹಿಳೆಗೆ ತಗುಲಿದ್ದು, ಗಾಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಜನದಟ್ಟಣೆಯಿರುವ ಪ್ರದೇಶದಲ್ಲಿ ಏಕಾಏಕಿ ಸಂಭವಿಸಿದ ಗುಂಡಿನ ದಾಳಿಯಿಂದ ಕಂಗೆಟ್ಟ ಜನ ಸಿಕ್ಕಿದೆಡೆಗೆ ಓಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿಯು ಕೆಲವು ಸುತ್ತುಗಳ ಗುಂಡಿನ ದಾಳಿಯ ಬಳಿಕ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದಾರೆ.
'5 ನಿಮಿಷಗಳಲ್ಲಿ ಎಲ್ಲವೂ ನಡೆದು ಹೋಯಿತು' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.