ADVERTISEMENT

ಕೋಟಾ ಕೋಚಿಂಗ್: ಒತ್ತಡ ನಿವಾರಣೆಗೆ ಜಿಲ್ಲಾಧಿಕಾರಿಯ ‘ಡಿನ್ನರ್ ವಿತ್ ಕಲೆಕ್ಟರ್‌’

ಪಿಟಿಐ
Published 3 ಫೆಬ್ರುವರಿ 2024, 12:50 IST
Last Updated 3 ಫೆಬ್ರುವರಿ 2024, 12:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೋಟಾ (ರಾಜಸ್ಥಾನ): ಜೆಇಇ ಹಾಗೂ ನೀಟ್‌ನಂತ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಮೇಲೆ ಹೆಚ್ಚಾಗಿರುವ ಒತ್ತಡ ನಿವಾರಣೆಗೆ ‘ಕಾಮ್ಯಾಬ್‌ ಕೋಟಾ’ ಎಂಬ ವಾರಕ್ಕೊಮ್ಮೆ ‘ಜಿಲ್ಲಾಧಿಕಾರಿ ಜತೆ ಊಟ‘ ಅಭಿಯಾನವನ್ನು ಜಿಲ್ಲಾಧಿಕಾರಿ ಡಾ. ರವೀಂದ್ರ ಗೋಸ್ವಾಮಿ ಆರಂಭಿಸಿದ್ದಾರೆ.

‘ಕೋಟಾ ಫ್ಯಾಕ್ಟರಿ’ ಎಂದೇ ಕರೆಯಲಾಗುವ ಇಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಎದುರಿಸಬೇಕಾದ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯಲು ದೇಶದ ಹಲವು ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ ಒತ್ತಡ ನಿರ್ವಹಿಸಲಾಗದೆ ಕೆಲವರು ಆತ್ಮಹತ್ಯೆಗೆ ಶರಣಾದ ಬಹಳಷ್ಟು ಸುದ್ದಿಗಳು ವರದಿಯಾಗಿವೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಭಿಯಾನ ಕೈಗೊಂಡಿದ್ದು, ಕೋಟಾದಲ್ಲಿರುವ ಒಂದೊಂದು ಹಾಸ್ಟೆಲ್‌ಗಳಲ್ಲಿ ವಾರಕ್ಕೊಮ್ಮೆ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಊಟ ಮಾಡಲಿದ್ದಾರೆ. ಜತೆಗೆ ವಿದ್ಯಾರ್ಥಿಗಳ ಮನದ ಮಾತನ್ನು ಆಲಿಸಲಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಫೆ. 1ರಂದು ಇಲ್ಲಿನ ಇಂದ್ರಪ್ರಸ್ಥ ಪ್ರದೇಶದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಬಾಲಿವುಡ್‌ನ ಗೀತೆಯನ್ನು ಡಾ. ಗೋಸ್ವಾಮಿ ಹಾಡಿದರು. ಜತೆಗೆ ಯಶಸ್ಸಿನ ಮಂತ್ರಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.

ಪ್ರತಿ ವರ್ಷ ಕೋಟಾಕ್ಕೆ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಬರುತ್ತಾರೆ. ಆದರೆ 2023ರಿಂದ ಈಚೆಗೆ ಕೋಟಾದಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟಾದಲ್ಲಿ ಒಟ್ಟು 4,500 ಹಾಸ್ಟೆಲ್‌ಗಳಿವೆ. 40 ಸಾವಿರ ಪಿಜಿಗಳಿವೆ. 

ತಮ್ಮ ಮೊದಲ ಭೇಟಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ 2016ನೇ ತಂಡದ ಐಎಎಸ್ ಅಧಿಕಾರಿ ಡಾ. ರವೀಂದ್ರ ಗೋಸ್ವಾಮಿ, ‘ನಮ್ಮ ಮೇಲೆ ನಾವೇಕೆ ಅನುಮಾನ ಹುಟ್ಟಿಸಿಕೊಳ್ಳಬೇಕು?‘ ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಪರೀಕ್ಷೆಗೂ ಮೊದಲು ಆತಂಕ ಉಂಟಾಗುವುದೇಕೆ? ಅದನ್ನು ಹೇಗೆ ನಿಭಾಯಿಸಬೇಕು? ಎಂದು ಕೃಪಾ ಎಂಬ ವಿದ್ಯಾರ್ಥಿನಿ ಜಿಲ್ಲಾಧಿಕಾರಿಗೆ ಪ್ರಶ್ನೆ ಕೇಳಿದಳು.

ಇದಕ್ಕೆ ಉತ್ತರಿಸಿದ ಡಾ. ಗೋಸ್ವಾಮಿ, ‘ನಮ್ಮ ಸಾಮರ್ಥ್ಯದ ಮೇಲೆ ಶಂಕೆ ಹಾಗೂ ಆತಂಕ ಎರಡೂ ಮಿತಿಯಲ್ಲಿದ್ದರೆ ಅದು ನಮ್ಮೊಳಗಿನ ಸಹಾನುಭೂತಿಯ ನರವ್ಯೂಹ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆ. ಇದು ನಮ್ಮೊಳಗೆ ಹೋರಾಡುವ ಶಕ್ತಿಯನ್ನು ಉದ್ದೀಪಿಸುತ್ತದೆ. ಆದರೆ ಅದೇ ಆತಂಕ ಹೆಚ್ಚಾದಲ್ಲಿ ಅದೇ ಶಕ್ತಿ ನಮ್ಮೊಡನೆ ಹೋರಾಡಲು ಶುರು ಮಾಡುತ್ತದೆ’ ಎಂದರು.

‘ಇದೇ ಕೋಟಾದಲ್ಲೇ ನಾನು ಕಲಿತೆ. ಎರಡು ವರ್ಷಗಳಲ್ಲಿ ಟೆಸ್ಟ್‌ ಸಿರೀಸ್‌ನಲ್ಲಿ ನನ್ನ ಹೆಸರಾಗಲೀ ಅಥವಾ ನಾನು ಗಳಿಸಿದ ಅಂಕಗಳಾಗಲೀ ಮುನ್ನೆಲೆಗೆ ಬರಲೇ ಇಲ್ಲ. ಆದರೆ ನಾನು ಚಿಂತಿತನಾಗಲಿಲ್ಲ. ನಮ್ಮ ಮುಂದೆ ದೇವರು ಬಹಳಷ್ಟು ಅವಕಾಶಗಳ ಬಾಗಿಲು ಇಟ್ಟಿರುತ್ತಾರೆ. ಹೀಗಾಗಿ ನಮ್ಮ ಸಾಮರ್ಥ್ಯದ ಬಗ್ಗೆ ನಮಗೇಕೆ ಶಂಕೆ ಇರಬೇಕು’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.