ADVERTISEMENT

ಕೆಎಸ್‌ಆರ್‌ಟಿಸಿ: ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಒತ್ತು

ಕೆ.ಓಂಕಾರ ಮೂರ್ತಿ
Published 17 ಮೇ 2020, 8:19 IST
Last Updated 17 ಮೇ 2020, 8:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಆನ್‌ಲೈನ್‌ ಬುಕ್ಕಿಂಗ್‌, ಪಾಸ್‌ ಹಾಗೂ ಡಿಜಿಟಲೀಕರಣ ವ್ಯವಸ್ಥೆಗೆ ಒತ್ತು ನೀಡಲು ಮುಂದಾಗಿದೆ.

ಪೂರ್ಣ ಪ್ರಮಾಣದಲ್ಲಿ ಬಸ್‌ ಸಂಚಾರ ಆರಂಭವಾದ ಮೇಲೆ ಪ್ರಯಾಣಿಕರಿಗೆ ಚಿಲ್ಲರೆ, ನೋಟು ನೀಡುವ, ಪಡೆಯುವ ಪ್ರಕ್ರಿಯೆ ತಗ್ಗಿಸಲು ಹಾಗೂ ಅಂತರ ಕಾಯ್ದುಕೊಳ್ಳಲು ಈ ಕ್ರಮ ಅನುಸರಿಸಲಾಗುತ್ತಿದೆ.

‘ಗೃಹ ಸಚಿವಾಲಯದಿಂದ ಈ ಸಂಬಂಧ ಮಾರ್ಗಸೂಚಿ ಬರುವ ಸಾಧ್ಯತೆ ಇದೆ. ಆದರೆ, ನಗದು ರಹಿತ ವ್ಯವಸ್ಥೆ ನಿರ್ಮಿಸಲು ಮುಂಗಡ ಬುಕ್ಕಿಂಗ್‌ ಉತ್ತಮ ಆಯ್ಕೆ. ನಿಗಮವು ಈ ವ್ಯವಸ್ಥೆಗೆ ಒತ್ತು ನೀಡಲಿದೆ. ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಲು ಕಲಿಯಬೇಕು. ಮುಂದೆ ಈ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಮೈಸೂರು, ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಮಾಸಿಕ, ದೈನಿಕ ಪಾಸ್‌ ವಿತರಣೆ ಹೆಚ್ಚಿಸುವ ಮೂಲಕ ನಗದು ರಹಿತ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಸೋಂಕು ತಡೆಯಲು ಕೆಲ ಕಟ್ಟುನಿಟ್ಟಿನ ಕ್ರಮ ಅನುಸರಿಸಲೂ ಮುಂದಾಗಿದೆ.

‘ನೋಟು, ಚಿಲ್ಲರೆ ಪಡೆಯುವ ವಿಚಾರದಲ್ಲಿ ಕೆಲವರಲ್ಲಿ ಆತಂಕ ನಿರ್ಮಾಣವಾಗಿರುವುದು ನಿಜ. ಆದರೆ, ಕೆಲವು ಕೂಲಿ ಕಾರ್ಮಿಕರು, ಗ್ರಾಮೀಣ ಜನರಿಗೆ ಆನ್‌ಲೈನ್‌ ವ್ಯವಸ್ಥೆ ಗೊತ್ತಿಲ್ಲ. ಹೀಗಾಗಿ, ಆನ್‌ಲೈನ್‌ ಮತ್ತು ನಗದು ಎರಡೂ ವ್ಯವಸ್ಥೆ ಇರಬೇಕು’ ಎಂದು ಮೈಸೂರು ಗ್ರಾಹಕರ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಪ್ರಕಾಶ್‌ ಸಲಹೆ ನೀಡಿದ್ದಾರೆ.

ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸಿದರೆ ಹಲವು ಸಮಸ್ಯೆ ತಪ್ಪಿಸಬಹುದು. ಕಾರ್ಡ್‌ ಕೂಡಾ ಸ್ವೀಕರಿಸುತ್ತಿದ್ದೇವೆ. ಡಿಜಿಟಲೀಕರಣ ವ್ಯವಸ್ಥೆ ಮುಂದೆ ಬರಲಿದೆ

- ಪ್ರಭಾಕರ ರೆಡ್ಡಿ, ಮುಖ್ಯ ಸಂಚಾರ ವ್ಯವಸ್ಥಾಪಕ, ಕೆಎಸ್‌ಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.