ADVERTISEMENT

ಹೈದರಾಬಾದ್‌ | ಔತಣಕೂಟದಲ್ಲಿ ಮಾದಕವಸ್ತು ಬಳಕೆ: ರಾಜಕೀಯ ವಿವಾದ

ಕೆ.ಟಿ. ರಾಮರಾವ್ ಅವರ ಸೋದರ ಸಂಬಂಧಿ ಆಯೋಜಿಸಿದ್ದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:24 IST
Last Updated 28 ಅಕ್ಟೋಬರ್ 2024, 14:24 IST
ಕೆ.ಟಿ. ರಾಮರಾವ್‌
ಕೆ.ಟಿ. ರಾಮರಾವ್‌   

ಹೈದರಾಬಾದ್‌: ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರ ಸೋದರ ಸಂಬಂಧಿಯೊಬ್ಬರು ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ ಔತಣಕೂಟವು ತೆಲಂಗಾಣದಲ್ಲಿ ವಿವಾದ ಸೃಷ್ಟಿಸಿದೆ. ಈ ಸಂಬಂಧ, ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಆರ್‌ಎಸ್‌ ನಾಯಕರು ಪರಸ್ಪರ ಆರೋಪ–ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. 

ಈ ಔತಣಕೂಟದಲ್ಲಿ ಮಾದಕವಸ್ತುವನ್ನು ಹಾಗೂ ಅನುಮತಿ ಪಡೆಯದೆಯೇ ವಿದೇಶಿ ಮದ್ಯವನ್ನು ಬಳಕೆ ಮಾಡಲಾಗಿದ್ದು, ಇದೊಂದು ‘ರೇವ್‌ ಪಾರ್ಟಿ’ ಎಂಬುದಾಗಿ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್‌ನ ಆರೋಪಗಳನ್ನು ಅಲ್ಲಗಳೆದಿರುವ ಕೆ.ಟಿ. ರಾಮರಾವ್‌ ಅವರು, ಇದೊಂದು ಕೌಟುಂಬಿಕ ಸಮಾರಂಭವಷ್ಟೆ ಎಂದಿದ್ದಾರೆ.

ಕೂಟದಲ್ಲಿ ಭಾಗಿಯಾಗಿದ್ದ ಒಬ್ಬ ವ್ಯಕ್ತಿಯ ದೇಹದಲ್ಲಿ ಕೊಕೇನ್‌ ಅಂಶ ಪತ್ತೆಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಔತಣಕೂಟದ ಆಯೋಜಕರಾದ ರಾಜ್‌ ಪಾಕಾಲ ಅವರಿಗೆ ನೋಟಿಸ್‌ ನೀಡಲಾಗಿದೆ. ಈ ಮಧ್ಯೆ, ಪಾಕಾಲ ಅವರು ತೆಲಂಗಾಣ ಹೈಕೋರ್ಟ್‌ಗೆ ಸೋಮವಾರ ತುರ್ತು ವಿಚಾರಣಾ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಪಾಕಾಲ ಅವರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರರಿಗೂ ಸೂಚಿಸಿದೆ.

ADVERTISEMENT

ಪ್ರಕರಣವೇನು?: ಕೆ.ಟಿ. ರಾಮರಾವ್ ಅವರ ಸೋದರ ಸಂಬಂಧಿಯೂ ಆಗಿರುವ ಉದ್ಯಮಿ ರಾಜ್‌ ಪಾಕಾಲ ಅವರು ಹೈದರಾಬಾದ್‌ನ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಅಕ್ಟೋಬರ್‌ 26ರ ತಡರಾತ್ರಿ ಔತಣಕೂಟ ಆಯೋಜಿಸಿದ್ದರು. ಈ ವೇಳೆ ತೆಲಂಗಾಣ ಪೊಲೀಸ್‌ ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಪಾರ ಪ್ರಮಾಣದ ಮದ್ಯ ಹಾಗೂ ಜೂಜಾಟದ ಕಿಟ್‌ಗಳನ್ನು ವಶಪಡಿಸಿಕೊಂಡಿದ್ದರು. ಔತಣಕೂಟದಲ್ಲಿ ಭಾಗಿಯಾಗಿದ್ದ 21 ಪುರುಷರನ್ನು ಮಾದಕವಸ್ತು ಪರೀಕ್ಷೆಗೆ ಒಳಪಡಿಸಿದ್ದು, ಅಮೆರಿಕ ನಿವಾಸಿ ವಿಜಯ್‌ ಮದ್ದೂರಿ ಎಂಬುವವರ ದೇಹದಲ್ಲಿ ಕೊಕೇನ್‌ ಅಂಶ ಪತ್ತೆಯಾಗಿದೆ. ಅಗತ್ಯ ಅನುಮತಿ ಪಡೆಯದೆ ವಿದೇಶಿ ಮದ್ಯ ಬಳಕೆ ಹಾಗೂ ನಿಷೇಧಿತ ಮಾದಕವಸ್ತು ಬಳಕೆ ಸಂಬಂಧ ಹೈದರಾಬಾದ್‌ನ ಮೋಕಿಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.