ADVERTISEMENT

ಟೆಂಡರ್ ನೀಡಿಕೆಯಲ್ಲಿ ಅವ್ಯವಹಾರ: ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಕೆಟಿಆರ್ ಆರೋಪ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 14:39 IST
Last Updated 21 ಸೆಪ್ಟೆಂಬರ್ 2024, 14:39 IST
<div class="paragraphs"><p>ಬಿಆರ್‌ಎಸ್‌ ನಾಯಕ ಕೆ.ಟಿ. ರಾಮ ರಾವ್ </p></div>

ಬಿಆರ್‌ಎಸ್‌ ನಾಯಕ ಕೆ.ಟಿ. ರಾಮ ರಾವ್

   

–ಪಿಟಿಐ ಚಿತ್ರ

ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ಭಾಗಿಯಾಗಿರುವ ₹8,888 ಕೋಟಿ ಮೊತ್ತದ ಭಾರಿ ಹಗರಣವೊಂದು ನಡೆದಿದೆ ಎಂದು ಬಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ (ಕೆಟಿಆರ್) ಆರೋಪಿಸಿದರು.

ADVERTISEMENT

ಕೇಂದ್ರ ಸರ್ಕಾರದ ‘ಅಮೃತ್ 2.0’ ಯೋಜನೆಯ ಅಡಿಯಲ್ಲಿ ಟೆಂಡರ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ, ಮುಖ್ಯಮಂತ್ರಿ ರೆಡ್ಡಿ ಅವರು ತಮ್ಮ ಸ್ಥಾನವನ್ನು ತಮ್ಮ ಕುಟುಂಬದ ಸದಸ್ಯರಿಗೆ ಹಾಗೂ ಜೊತೆಗಾರರಿಗೆ ಲಾಭ ಮಾಡಿಕೊಡಲು ಬಳಸಿದ್ದಾರೆ ಎಂದು ಕೆಟಿಆರ್ ದೂರಿದರು.

ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ರೆಡ್ಡಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಗತ್ಯ ಅರ್ಹತೆ ಇಲ್ಲದ ಕಂಪನಿಗಳಿಗೂ ಭಾರಿ ಪ್ರಮಾಣದ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಹಲವು ಕಂಪನಿಗಳು ಮುಖ್ಯಮಂತ್ರಿ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿವೆ ಎಂದು ಕೆಟಿಆರ್ ಹೇಳಿದರು. ರೆಡ್ಡಿ ಅವರ ಸಂಬಂಧಿ ಸೂಧಿನಿ ಸೃಜನ್ ರೆಡ್ಡಿ ಅವರ ಮಾಲೀಕತ್ವದ ಶೋಧಾ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ವಿರುದ್ಧವೂ ಕೆಟಿಆರ್ ಆರೋಪ ಹೊರಿಸಿದ್ದಾರೆ.

ಈ ಕಂಪನಿಯ ಘೋಷಿತ ಲಾಭವು ₹2 ಕೋಟಿ ಮಾತ್ರ ಆಗಿದ್ದರೂ, ರೇವಂತ ರೆಡ್ಡಿ ಅವರು ₹1,137 ಕೋಟಿ ಮೊತ್ತದ ಕಾಮಗಾರಿಯ ಗುತ್ತಿಗೆ ನೀಡಿದ್ದಾರೆ. ಷೇರುಪೇಟೆಯಲ್ಲಿ ನೋಂದಾಯಿತವಾಗಿರುವ ಇಂಡಿಯನ್ ಹ್ಯೂಮ್ ಪೈಪ್ ಲಿಮಿಟೆಡ್‌ ಕಂಪನಿಯು ಶೋಧಾ ಇನ್‌ಫ್ರಾಸ್ಟ್ರಕ್ಚರ್ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ಬಲವಂತ ಮಾಡಲಾಯಿತು. ಇಂಡಿಯನ್ ಹ್ಯೂಮ್ ಪೈಪ್ ಕಂಪನಿಗೆ ಯೋಜನೆಯ ಶೇ 20ರಷ್ಟು ಕೆಲಸ ಮಾತ್ರ ನೀಡಲಾಯಿತು, ಶೋಧಾ ಇನ್‌ಫ್ರಾಸ್ಟ್ರಕ್ಚರ್‌ಗೆ ಶೇ 80ರಷ್ಟು ಕೆಲಸಗಳನ್ನು ವಹಿಸಲಾಯಿತು. ಇದರಿಂದಾಗಿ ಇಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ಗುತ್ತಿಗೆಗಳನ್ನು ಕೊಡಿಸುವ ಕೆಲಸದಲ್ಲಿ ಮುಖ್ಯಮಂತ್ರಿಯವರು ವೈಯಕ್ತಿಕವಾಗಿ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಕೆಟಿಆರ್ ದೂರಿದರು. ಅಲ್ಲದೆ, ಮುಖ್ಯಮಂತ್ರಿಯವರು ಅಮೃತ್ 2.0 ಯೋಜನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ತಡೆಹಿಡಿದಿದ್ದಾರೆ. ಆ ಎಲ್ಲ ಮಾಹಿತಿಯನ್ನು ಸಾರ್ವಜನಿಕರ ಪರಿಶೀಲನೆಗೆ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.