ADVERTISEMENT

ಮಣಿಪುರ: ಕುಕಿ ಗುಂಪುಗಳಿಂದ ಇಂದಿನಿಂದ ಸರ್ಕಾರಿ ಕಚೇರಿಗಳ ಬಲವಂತದ ಬಂದ್‌

ಕಾನ್‌ಸ್ಟೆಬಲ್‌ ಅಮಾನತು ಹಿಂಪಡೆಯಲು ನೀಡಿದ್ದ ಗಡುವು ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 20:37 IST
Last Updated 18 ಫೆಬ್ರುವರಿ 2024, 20:37 IST
-
-   

ಗುವಾಹಟಿ: ಕಾನ್‌ಸ್ಟೆಬಲ್‌ವೊಬ್ಬರ ಅಮಾನತು ಹಿಂಪಡೆಯಲು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಣಿಪುರದ ಚುರಚಾಂದಪುರ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್‌ ಮಾಡುವ ಕಾರ್ಯವನ್ನು ಸೋಮವಾರದಿಂದ ಆರಂಭಿಸಲು ಕುಕಿ ಸಂಘಟನೆಗಳ ವೇದಿಕೆ ಐಟಿಎಲ್‌ಎಫ್‌ ಮುಂದಾಗಿದೆ.

ಈ ಬಗ್ಗೆ ಐಟಿಎಲ್‌ಎಫ್‌ ಮುಖ್ಯಸ್ಥ ಪಗಿನ್ ಹಾವೋಕಿಪ್ ಮತ್ತು ಕಾರ್ಯದರ್ಶಿ ಹೂಮಾನ್ ತೊಂಬಿಂಗ್‌ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಚುರಚಾಂದಪುರ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸೋಮವಾರದಿಂದ ಕೆಲಸಕ್ಕೆ ಹಾಜರಾಗಬಾರದು. ಒಂದು ವೇಳೆ ಕಚೇರಿಗಳಲ್ಲಿ ಯಾರಾದರೂ ಕಾಣಿಸಿಕೊಂಡಲ್ಲಿ, ಮುಂದಾಗುವ ಯಾವುದೇ ಅಹಿತಕರ ಪರಿಣಾಮಕ್ಕೆ ಅವರನ್ನೇ ಹೊಣೆ ಮಾಡಲಾಗುವುದು’ ಎಂದು ಹೇಳಿಕೆಯಲ್ಲಿ ಅವರು ಎಚ್ಚರಿಸಿದ್ದಾರೆ.

ADVERTISEMENT

ಕುಕಿ ಸಮುದಾಯಕ್ಕೆ ಸೇರಿದ ಕಾನ್‌ಸ್ಟೆಬಲ್ ಸಿಯಾಮ್‌ಲಾಲ್‌, ಶಸ್ತ್ರಧಾರಿ ಕುಕಿ ವ್ಯಕ್ತಿಯೊಂದಿಗೆ ಚಿತ್ರ ತೆಗೆಸಿಕೊಂಡಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಸಿಯಾಮ್‌ಲಾಲ್‌ ಅವರನ್ನು ಅಮಾನತು ಮಾಡಲಾಗಿತ್ತು. 

ಇದನ್ನು ಖಂಡಿಸಿ ಕುಕಿ ಸಮುದಾಯದವರು ಗುರುವಾರ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತಲ್ಲದೇ, ಇಬ್ಬರ ಹತ್ಯೆಯಾಗಿತ್ತು.  

ಕಾನ್‌ಸ್ಟೆಬಲ್‌ ಅಮಾನತು ಆದೇಶವನ್ನು ಹಿಂಪಡೆಯಬೇಕು ಹಾಗೂ ಹಿಂಸಾಚಾರ, ಇಬ್ಬರ ಹತ್ಯೆ ಹೊಣೆ ಹೊತ್ತು ಜಿಲ್ಲಾಧಿಕಾರಿ ಎಸ್‌.ಧರುಣಕುಮಾರ್‌ ಹಾಗೂ ಎಸ್ಪಿ ಶಿವಾನಂದ ಸುರ್ವೆ ಅವರು ಜಿಲ್ಲೆಯನ್ನು ತೊರೆಯುವಂತೆ ಹೇಳಿದ್ದ ಐಟಿಎಲ್‌ಎಫ್‌, 24 ಗಂಟೆಗಳ ಗಡುವು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.