ADVERTISEMENT

ಮಣಿಪುರ ಹಿಂಸಾಚಾರಕ್ಕೆ ಸಿಎಂ ಬಿರೇನ್ ಸಂಚು ಆರೋಪ: ತನಿಖೆಗೆ ಕುಕಿ ಸಮುದಾಯದ ಪತ್ರ

ಪಿಟಿಐ
Published 5 ಸೆಪ್ಟೆಂಬರ್ 2024, 12:40 IST
Last Updated 5 ಸೆಪ್ಟೆಂಬರ್ 2024, 12:40 IST
**EDS, VIDEOGRAB FROM PTI VIDEO** Imphal: Manipur Chief Minister N. Biren Singh during an interview with PTI, in Imphal, Thursday, Aug 29, 2024. (PTI Photo) (PTI08_30_2024_000019B)
**EDS, VIDEOGRAB FROM PTI VIDEO** Imphal: Manipur Chief Minister N. Biren Singh during an interview with PTI, in Imphal, Thursday, Aug 29, 2024. (PTI Photo) (PTI08_30_2024_000019B)   

ನವದೆಹಲಿ: ಮಣಿಪುರದಲ್ಲಿ ಕುಕಿ ಸಮುದಾಯದ ವಿರುದ್ಧ ದೊಡ್ಡ ಪ್ರಮಾಣದ ಜನಾಂಗೀಯ ಹಿಂಸಾಚಾರ ನಡೆಸಲು ಸಂಚು ರೂಪಿಸಿದ ಆರೋಪದ ಮೇಲೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆಗೆ ನಡೆಸುವಂತೆ ಒತ್ತಾಯಿಸಿ, ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಅಧಿಕಾರಿಗೆ ಕುಕಿ ಸಮುದಾಯದ ಸಂಘಟನೆಯೊಂದು ಪತ್ರ ಬರೆದಿದೆ.

ಜನಾಂಗೀಯ ಹಿಂಸಾಚಾರ ಕುರಿತಾದ ತನಿಖೆಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಅಧಿಕಾರಿ ದತ್ತಾತ್ರೇಯ ಪಡಸಾಲ್ಗಿಕರ್ ಅವರಿಗೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕುಕಿ ಸಂಘಟನೆಯು(ಕೆಒಎಚ್‌ಯುಆರ್) ಪತ್ರ ಬರೆದಿದೆ.

ಅಧಿಕಾರಿ ದತ್ತಾತ್ರೇಯ ಪಡಸಾಲ್ಗಿಕರ್ ಅವರಿಗೆ ಗೃಹ ಕಾರ್ಯದರ್ಶಿ ಮೂಲಕ ಪತ್ರ ಬರೆದಿರುವ ಸಂಘಟನೆಯು, ಮಣಿಪುರ ಸಿಎಂ ಹಿಂಸಾಚಾರಕ್ಕೆ ಸಂಚು ರೂಪಿಸಿರುವ ಕುರಿತಾದ ಕೆಲವು ಲೇಖನಗಳು ಮತ್ತು ಸೋರಿಕೆಯಾದ ಕೆಲವು ಆಡಿಯೊಕ್ಲಿಪ್‌ಗಳನ್ನು ಸಂಘಟನೆ ಸಲ್ಲಿಸಿದ್ದು, ಕ್ರಮಕ್ಕೆ ಒತ್ತಾಯಿಸಿದೆ.

ADVERTISEMENT

ಈ ಆರೋಪವನ್ನು ತಳ್ಳಿಹಾಕಿರುವ ಮಣಿಪುರ ಸರ್ಕಾರ, ಇದು ತಿರುಚಿದ ಆಡಿಯೊ ಎಂದು ಹೇಳಿತ್ತು.

ಮಣಿಪುರದ ಜನಾಂಗೀಯ ಅಲ್ಪಸಂಖ್ಯಾತ ಕುಕಿ ಸಮುದಾಯದವರ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಸೇರಿದಂತೆ ಬೃಹತ್ ಪ್ರಮಾಣದ ಜನಾಂಗೀಯ ಹಿಂಸಾಚಾರ ನಡೆಸಲು ಸಂಚು ರೂಪಿಸಿರುವ ಇತರರು ವಿರುದ್ಧವೂ ಎಫ್‌ಐಆರ್ ದಾಖಲಿಸಿ. ತನಿಖೆಗೆ ನಡೆಸಲು ಸಂಘಟನೆ ಕೋರಿದೆ.

ಈ ಪತ್ರದ ಜೊತೆಗೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರದ್ದು ಎನ್ನಲಾದ 48 ನಿಮಿಷಗಳ ಆಡಿಯೊವನ್ನೂ ಸಂಘಟನೆ ಸಲ್ಲಿಸಿದೆ.

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಈ ಆಡಿಯೊ ಸಾಕು. ಸಲ್ಲಿಕೆ ಮಾಡಲಾಗಿರುವ ಆಡಿಯೊ ಸುಳ್ಳು, ತಿರುಚಿದ ಆಡಿಯೊ ಎಂದು ಕಂಡುಬಂದರೂ ಸಹ ಅಂತಹ ಆಡಿಯೊ ಸೃಷ್ಟಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮಕ್ಕೆ ಸಂಘಟನೆ ಒತ್ತಾಯಿಸಿದೆ.

ಹಿಂಸಾಚಾರಕ್ಕೆ ಸಂಚು ರೂಪಿಸಿದ್ದಾರೆನ್ನಲಾದ ಆಡಿಯೊ ಬಗ್ಗೆ ಇತ್ತೀಚಿನ ಪಿಟಿಐ ಸಂದರ್ಶನದಲ್ಲಿ ಉತ್ತರಿಸಿದ್ದ ಸಿಂಗ್, ಇದೊಂದು ತಿರುಚಿದ ಆಡಿಯೊ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ದರು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಭುಗಿಲೆದ್ದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.