ADVERTISEMENT

ಪ್ರಯಾಗರಾಜ್‌: ಕುಂಭ ಮೇಳದಲ್ಲಿ ಸಂತರ ಸಮಾಗಮ

ಗಂಗಾ, ಯಮುನಾ, ಸರಸ್ವತಿ ಸಂಗಮದಲ್ಲಿ ಮಿಂದ ಒಂದೂವರೆ ಕೋಟಿ ಮಂದಿ

ಪಿಟಿಐ
Published 15 ಜನವರಿ 2019, 20:00 IST
Last Updated 15 ಜನವರಿ 2019, 20:00 IST
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಕರ ಸಂಕ್ರಾತಿ ದಿನವಾದ ಮಂಗಳವಾರ ನಾಗಾಸಾಧುಗಳು ಶಾಹಿ ಸ್ನಾನದಲ್ಲಿ ಮಿಂದೆದ್ದರು –ಪಿಟಿಐ ಚಿತ್ರ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಮಕರ ಸಂಕ್ರಾತಿ ದಿನವಾದ ಮಂಗಳವಾರ ನಾಗಾಸಾಧುಗಳು ಶಾಹಿ ಸ್ನಾನದಲ್ಲಿ ಮಿಂದೆದ್ದರು –ಪಿಟಿಐ ಚಿತ್ರ   

ಲಖನೌ:ಮಕರ ಸಂಕ್ರಾಂತಿ ದಿನವಾದ ಮಂಗಳವಾರ ಮುಂಜಾನೆ ಬೆಳಕು ಮೂಡುವುದಕ್ಕೂ ಮುನ್ನವೇ ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿಯ ಸಂಗಮದಲ್ಲಿ ‘ಹರ್‌ ಹರ್‌ ಗಂಗೇ’ ಘೋಷ ಮುಗಿಲು ಮುಟ್ಟಿತ್ತು. ಲಕ್ಷಾಂತರ ಭಕ್ತರು, ಸಾಧು-ಸಂತರು ಮತ್ತು ಧಾರ್ಮಿಕ ಮುಖಂಡರು ಕುಂಭ ಮೇಳದ ಮೊದಲ ಪವಿತ್ರ ‘ಶಾಹಿ ಸ್ನಾನ’ದಲ್ಲಿ ಭಾಗಿಯಾದರು. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಜನರು ಮಂಗಳವಾರ ಬೆಳಿಗ್ಗೆ 4ಗಂಟೆಯ ಹೊತ್ತಿಗೇ ಸಂಗಮವನ್ನು ತಲುಪಿದ್ದರು.

13 ಅಖಾಡಾಗಳ ಸಂತರು ಬೆಳಿಗ್ಗೆ ಮೊದಲಿಗೆ ಪವಿತ್ರ ಸ್ನಾನ ಮಾಡಿದರು. ಕೆಲವರು ಗಾಂಭೀರ್ಯದಿಂದ, ಕೆಲವರು ಭಕ್ತಿ ಗೀತೆಗಳನ್ನು ಹಾಡುತ್ತಾ ನರ್ತಿಸುತ್ತಾ ಸ್ನಾನಕ್ಕಾಗಿ ಸಂಗಮದತ್ತ ಸಾಗಿದ ದೃಶ್ಯ ಮನೋಹರವಾಗಿತ್ತು.

ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ ಎಂಬ ಹೆಗ್ಗಳಿಕೆಯ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಂಗಳವಾರ ಆರಂಭವಾಯಿತು. ಮೊದಲ ದಿನದ ಶಾಹಿ ಸ್ನಾನದಲ್ಲಿ ಒಂದೂವರೆ ಕೋಟಿಜನರು ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ADVERTISEMENT

ಮಂಗಳವಾರ ಮಧ್ಯಾಹ್ನದ ಹೊತ್ತಿಗೇ 1.1 ಕೋಟಿ ಜನರು ಪವಿತ್ರ ಸ್ನಾನ ಮಾಡಿದ್ದರು. ಮತ್ತೆಯೂ ಭಾರಿ ಜನದಟ್ಟಣೆ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈತುಂಬಾ ಭಸ್ಮ ಬಳಿದುಕೊಂಡ ನಾಗಾ ಸಾಧುಗಳು ಮತ್ತು ವಿವಿಧ ಅಖಾಡಾಗಳ ಸಂತರು ಕುಂಭ ಮೇಳಕ್ಕೆ ಬಂದಿದ್ದರು.

ಕುಂಭ ಮೇಳದಲ್ಲಿ ಭಕ್ತ ಸಾಗರ

ಸ್ಮೃತಿ ಪವಿತ್ರ ಸ್ನಾನ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮಕರ ಸಂಕ್ರಾಂತಿಯ ದಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಂದಿನ ದಿನಗಳಲ್ಲಿ ಕುಂಭ ಮೇಳಕ್ಕೆ ಭೇಟಿ ಕೊಡುವ ನಿರೀಕ್ಷೆ ಇದೆ.

ಇತಿಹಾಸ ಸೃಷ್ಟಿಸಿದ ಕಿನ್ನರರು

ಕಿನ್ನರ ಸಾಧ್ವಿಯರಿಂದ ಪವಿತ್ರ ಸ್ನಾನ

ಬಹುಕಾಲದ ಸಂಪ್ರದಾಯ ಮತ್ತು ಧಾರ್ಮಿಕ ನಿರ್ಬಂಧಗಳನ್ನು ಮೀರಿದ ‘ಕಿನ್ನರ ಸಾಧ್ವಿ’ಯರು (ಲೈಂಗಿಕ ಅಲ್ಪಸಂಖ್ಯಾತರು) ಈ ಬಾರಿಯ ಕುಂಭ ಮೇಳದಲ್ಲಿ ಇತಿಹಾಸ ಸೃಷ್ಟಿಸಿದರು. ಇತರ ಅಖಾಡಾಗಳ ಸಂತರ
ಜತೆಗೆ ಸಾಧ್ವಿಯರೂ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

‘ಹರ ಹರ ಮಹಾದೇವ’ ಎಂಬ ಘೋಷಣೆ ಕೂಗುತ್ತಾ ನೂರಾರು ಸಾಧ್ವಿಯರು ಜುನಾ ಅಖಾಡಾದ ಸಂತರ ಜತೆಗೆ ಶಾಹಿ ಸ್ನಾನ ಮಾಡಿದರು.

ಕಿನ್ನರ ಅಖಾಡಾದ ಸದಸ್ಯರಿಗೆ ಇತರ ಅಖಾಡಾಗಳ ಸಂತರ ಜತೆ ಸ್ನಾನ ಮಾಡಲುಇದೇ ಮೊದಲಿಗೆ ಅವಕಾಶ ಕೊಡಲಾಗಿತ್ತು.

ಕಿನ್ನರ ಅಖಾಡಾಕ್ಕೆ ಇತ್ತೀಚಿನವರೆಗೆ ಮಾನ್ಯತೆಯೇ ಇರಲಿಲ್ಲ. ಅಖಿಲ ಭಾರತ ಅಖಾಡಾ ಪರಿಷತ್‌ ಮಾನ್ಯತೆಗೆ ನಿರಾಕರಿಸಿತ್ತು. ಈ ಅಖಾಡಾಕ್ಕೆ ಮಾನ್ಯತೆ ನೀಡಲು ಧಾರ್ಮಿಕ ನಿರ್ಬಂಧಗಳಿವೆ ಎಂದು ಹೇಳಿತ್ತು. ಆದರೆ, ಪವಿತ್ರ ಸ್ನಾನದ ಹಕ್ಕು ಕೊಡಲೇಬೇಕು ಎಂದು ಕಿನ್ನರ ಸಾಧ್ವಿಯರು ಹಟ ಹಿಡಿದಿದ್ದರು. ಜುನಾ ಅಖಾಡಾದಜತೆಗೆ ಕಿನ್ನರ ಅಖಾಡಾ ವಿಲೀನವಾದದ್ದರಿಂದಕಿನ್ನರ ಸಾಧ್ವಿಯರಿಗೆ ಪವಿತ್ರ ಸ್ನಾನದ ಅವಕಾಶ ಸಿಕ್ಕಿತು.

‘ಮಾನ್ಯತೆಗಾಗಿ ನಮ್ಮ ಬಹುಕಾಲದ ಹೋರಾಟಕ್ಕೆ ಫಲ ಸಿಕ್ಕಿದೆ. ಈಗ ನಾವು ಸಂತುಷ್ಟರಾಗಿದ್ದೇವೆ.ಕಿನ್ನರ ಅಖಾಡಾವು ಜುನಾ ಅಖಾಡಾದ ಜತೆಗೆವಿಲೀನವಾಗಿದ್ದರೂ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲಿದೆ’ ಎಂದು ಕಿನ್ನರ ಸಾಧ್ವಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಹೇಳಿದ್ದಾರೆ.

ಭವನನಾಥ ವಾಲ್ಮೀಕಿ ಅವರು ಕೆಲವು ವರ್ಷ ಹಿಂದೆ ಕಿನ್ನರ ಅಖಾಡಾವನ್ನು ಸ್ಥಾಪಿಸಿದ್ದರು. ಭವನನಾಥ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ತಮ್ಮ ಜಾತಿಯ ಜನರು ಸನಾತನ ಧರ್ಮದ ವಿಧಿವಿಧಾನಗಳನ್ನು ಪಾಲಿಸಲು ಸಾಧ್ಯವಾಗಬೇಕು ಎಂಬ ಕಾರಣಕ್ಕೆ ಅವರು ಈ ಅಖಾಡಾ ಸ್ಥಾಪಿಸಿದ್ದರು.

ಕುಂಭ ಮೇಳದ ಮೊದಲ ದಿನ ಕಿನ್ನರ ಸಾಧ್ವಿಯರೇ ಆಕರ್ಷಣೆಯ ಕೇಂದ್ರವಾಗಿದ್ದರು.

***

ಕಿನ್ನರರಾಗಿರುವುದು ಅಪರಾಧ ಅಲ್ಲ ಎಂಬುದನ್ನು ಧಾರ್ಮಿಕ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಇತರರ ಹಾಗೆಯೇ ನಾವು ಕೂಡ ಮನುಷ್ಯರು.

– ಲಕ್ಷ್ಮಿ ನಾರಾಯಣ ತ್ರಿಪಾಠಿ, ಕಿನ್ನರ ಸಾಧ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.