ADVERTISEMENT

ಕುಂಭ ಮೇಳ: ಜನಸಮೂಹ ತೆರವುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹಿಂತಿರುಗುವ ಪ್ರವಾಸಿಗಳಿಗೆ ಮಾರ್ಗಸೂಚಿ ರೂಪಿಸಲು ಮನವಿ

ಪಿಟಿಐ
Published 17 ಏಪ್ರಿಲ್ 2021, 15:58 IST
Last Updated 17 ಏಪ್ರಿಲ್ 2021, 15:58 IST
ಕುಂಭ ಮೇಳ ದೃಶ್ಯ (ಪಿಟಿಐ)
ಕುಂಭ ಮೇಳ ದೃಶ್ಯ (ಪಿಟಿಐ)   

ನವದೆಹಲಿ: ಕುಂಭ ಮೇಳಕ್ಕಾಗಿ ಹರಿದ್ವಾರದಲ್ಲಿ ಜಮಾವಣೆಗೊಂಡಿರುವ ಜನಸಮೂಹವನ್ನು, ಒಂದೇ ಸಮನೇ ಏರುತ್ತಿರುವ ಕೋವಿಡ್‌ ಪ್ರಕರಣಗಳ ಕಾರಣ ತೆರವುಗೊಳಿಸುವಂತೆ ಕೇಂದ್ರ ಮತ್ತು ಇತರ ಆಡಳಿತ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಮೇಳದಿಂದ ಹಿಂತಿರುಗುವ ಯಾತ್ರಿಗಳಿಗೆ ಸುರಕ್ಷತಾ ಕ್ರಮಗಳ ಮಾರ್ಗಸೂಚಿ ನಿಗದಿಪಡಿಸುವಂತೆಯೂ ಈ ಅರ್ಜಿಯಲ್ಲಿ ಕೋರಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸೋಂಕು ಪ್ರಕರಣಗಳು ವಿಪರೀತವಾಗಿ ಏರುತ್ತಿರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಜನರನ್ನು ಕುಂಭಮೇಳಕ್ಕೆ ಆಹ್ವಾನಿಸುತ್ತಿರುವ ಜಾಹೀರಾತುಗಳನ್ನು ಹಿಂಪಡೆಯುವಂತೆಯೂ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಕ್ಕೆ ತಕ್ಷಣವೇ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ರಾಜ್ಯಗಳಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು, ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

ನೊಯ್ಡಾ ನಿವಾಸಿ ಸಂಜಯ್‌ ಕುಮಾರ್‌ ಪಾಠಕ್‌ ಈ ಅರ್ಜಿ ದಾಖಲಿಸಿದ್ದಾರೆ. ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದು, ಈ ಒತ್ತಡದ ಭಾರದಿಂದ ನಲುಗಿ ಅನೇಕ ರಾಜ್ಯಗಳಲ್ಲಿ ಆರೋಗ್ಯ ಸೌಕರ್ಯಗಳು ಕುಸಿಯುವ ಹಂತಕ್ಕೆ ಬಂದುನಿಂತಿವೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಆಸ್ಪತ್ರೆ ಮತ್ತು ಚಿತಾಗಾರಗಳಲ್ಲಿ ಸ್ಥಳಾಭಾವ ಕಂಡುಬರುತ್ತಿದ್ದು, ಹಲವು ರಾಜ್ಯಗಳಲ್ಲಿ ಔಷಧಿ ಕೊರತೆ ತೀವ್ರವಾಗಿರುವ ವರದಿಗಳು ಬಂದಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.