ADVERTISEMENT

BJP ಕಾರ್ಯಕ್ರಮಕ್ಕೆ ಹೋದ ಘೋಷ್; TMC ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಜಾ

ಪಿಟಿಐ
Published 1 ಮೇ 2024, 16:25 IST
Last Updated 1 ಮೇ 2024, 16:25 IST
<div class="paragraphs"><p>ಕುನಾಲ್‌ ಘೋಷ್‌ </p></div>

ಕುನಾಲ್‌ ಘೋಷ್‌

   

–ಪಿಟಿಐ ಚಿತ್ರ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕುನಾಲ್‌ ಘೋಷ್‌ ಅವರನ್ನು ಬುಧವಾರ ವಜಾಗೊಳಿಸಲಾಗಿದೆ.

ADVERTISEMENT

ಬಿಜೆಪಿಯ ಲೋಕಸಭಾ ಅಭ್ಯರ್ಥಿಯೊಬ್ಬರ ಕಾರ್ಯಕ್ರಮಕ್ಕೆ ಹಾಜರಾಗಿ ಅವರನ್ನು ಹೊಗಳಿದ ಬೆನ್ನಲ್ಲೇ, ಘೋಷ್‌ ವಿರುದ್ಧ ಟಿಎಂಸಿ ಈ ಕ್ರಮ ಕೈಗೊಂಡಿದೆ.

‘ಕುನಾಲ್‌ ಅವರು ನೀಡುತ್ತಿದ್ದ ಹೇಳಿಕೆಗಳು ಪಕ್ಷದ ಸಿದ್ಧಾಂತಗಳಿಗೆ ಒಪ್ಪಿತವಾಗಿರಲಿಲ್ಲ’ ಎಂದು ಟಿಎಂಸಿ ಹೇಳಿದೆ.

‘ಈ ಮುನ್ನ‌ ಕುನಾಲ್‌ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ‌ ಬಿಡುಗಡೆಗೊಳಿಸಲಾಗಿತ್ತು. ಈಗ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗುತ್ತಿದೆ’ ಎಂದು ಪಕ್ಷದ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಯಾನ್‌ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಈ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ನಡೆ ಏನಿರಲಿದೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ಘೋಷ್‌,‘ಬರುವ ದಿನಗಳಲ್ಲಿ ಪಕ್ಷದಲ್ಲಿ ಮುಂದುವರಿಯಲು ಇಚ್ಛಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪಕ್ಷ ಕೈಗೊಂಡಿರುವ ಕ್ರಮ ಕುರಿತು ಪ್ರತಿಕ್ರಿಯಿಸಿರುವ ಘೋಷ್‌, ‘ಪಕ್ಷದ ವಕ್ತಾರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಈಗಾಗಲೇ ನಾನು ರಾಜೀನಾಮೆ ನೀಡಿರುವೆ. ಹೀಗಾಗಿ, ನನ್ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದು ಹಾಕಲಾಗಿದೆ ಎಂಬ ಮಾತಿಗೆ ಅರ್ಥವಿಲ್ಲ’ ಎಂದು ಹೇಳಿದ್ದಾರೆ.

‘ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದೆ. ಈಗ ನನ್ನ ಜವಾಬ್ದಾರಿಯನ್ನು ಮೊಟಕುಗೊಳಿಸಲು ಪಕ್ಷ ತೀರ್ಮಾನಿಸಿದೆ’ ಎಂದು ವಿಷಾದಿಸಿದ್ದಾರೆ.

ಮಾರ್ಚ್‌ ತಿಂಗಳಿನಲ್ಲಿಯೇ ಕುನಾಲ್‌ ಅವರು ಪಕ್ಷದ ವಕ್ತಾರ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ವಕ್ತಾರ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಪಕ್ಷವು ಅಂಗೀಕರಿಸಿತ್ತು. ಆದರೆ, ಮತ್ತೊಂದು ಸ್ಥಾನದಲ್ಲಿ ಮುಂದುವರಿಯುವಂತೆ ಕೇಳಿಕೊಂಡಿ‌ತ್ತು.

‘ಕುನಾಲ್‌ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಪಕ್ಷದ ಅಭಿಪ್ರಾಯಗಳೊಂದಿಗೆ ಮಿಳಿತಗೊಳಿಸಿ ಪ್ರಸಾರ ಮಾಡಬಾರದು. ಅವರ ಅಭಿಪ್ರಾಯಗಳೇ ಬೇರೆ. ನಮ್ಮ ಅಭಿಪ್ರಾಯಗಳೇ ಬೇರೆ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ ಕಾನೂನು ಕ್ರಮ ಎದುರಿಸಬೇಕಾಗಬಹುದು. ಎಐಟಿಸಿ (ಅಖಿಲ ಭಾರತೀಯ ತೃಣಮೂಲ ಕಾಂಗ್ರೆಸ್‌) ಮೂಲಕ ನೀಡಲಾಗುವ ಹೇಳಿಕೆಗಳನ್ನು ಮಾತ್ರ ಪಕ್ಷದ ಹೇಳಿಕೆಗಳೆಂದು ಪರಿಗಣಿಸಬೇಕು’ ಎಂದು ಟಿಎಂಸಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.